×
Ad

ಬಾಬ್ರಿ ಮಸೀದಿ ದ್ವಂಸ ಪ್ರಕರಣ : ವಿಚಾರಣೆ ಮಾ.23ಕ್ಕೆ ಮುಂದೂಡಿಕೆ

Update: 2017-03-22 21:59 IST

ಹೊಸದಿಲ್ಲಿ, ಮಾ.22: ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅಡ್ವಾಣಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಹಿಂದೂ ಬಲಪಂಥೀಯ ನಾಯಕರ ವಿರುದ್ದದ -ಅಪರಾಧಕ್ಕೆ ಕುಮ್ಮಕ್ಕು ನೀಡಿದ- ದೂರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾ.23ಕ್ಕೆ ಮುಂದೂಡಿದೆ.

ಕಳೆದ ವಿಚಾರಣೆ ಸಂದರ್ಭ ಉಪಸ್ಥಿತರಿದ್ದ , ವಿಭಾಗೀಯ ಪೀಠದ ಸದಸ್ಯರಾದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಅನುಪಸ್ಥಿತಿಯ ಕಾರಣ ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಮೂರ್ತಿ ಪಿ.ಸಿ.ಘೋಷ್ ತಿಳಿಸಿದರು.

ಆದರೆ ವಿಚಾರಣೆಯನ್ನು ನಾಲ್ಕುವಾರ ಮುಂದೂಡಬೇಕು ಎಂಬ ಅಡ್ವಾಣಿ ಪರ ವಕೀಲರ ಕೋರಿಕೆಯನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಘೋಷ್, ಏನು, ಈಗಲೇ ನಾನು ನಿವೃತ್ತಿಯಾಗಬೇಕೆಂದು ನಿಮ್ಮ ಇರಾದೆಯೇ ಎಂದು ತಮಾಷೆಯ ಧಾಟಿಯಲ್ಲಿ ಪ್ರಶ್ನಿಸಿದರು. ನ್ಯಾಯಮೂರ್ತಿ ಘೋಷ್ ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.

ನ್ಯಾಯಮೂರ್ತಿ ನಾರಿಮನ್ ಅನುಪಸ್ಥಿತಿ ಬಗ್ಗೆ ಹಲವು ವಕೀಲರು ಹುಬ್ಬೇರಿಸಿದರು. ಅಡ್ವಾಣಿ ಮತ್ತಿತರ 13 ಮುಖಂಡರ ವಿರುದ್ಧದ ಆರೋಪವನ್ನು ‘ತಾಂತ್ರಿಕ ಕಾರಣಗಳಿಂದ’ ಕೈಬಿಟ್ಟಿರುವ ವಿಚಾರಣಾ ನ್ಯಾಯಾಲಯದ ಕ್ರಮಕ್ಕೆ ಮಾ.6ರಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್‌ನ ಪೀಠವೊಂದು, ಘಟನೆಗೆ ಕುಮ್ಮಕ್ಕು ನೀಡಿರುವ ಆರೋಪವನ್ನು ಮರು ಪರಿಶೀಲಿಸುವ ಬಗ್ಗೆ ಸುಳಿವು ನೀಡಿತ್ತು.

ದಶಕಕ್ಕೂ ಹಳೆಯದಾದ ಪ್ರಕರಣವನ್ನು ಕೋರ್ಟ್‌ನ ಹೊರಗೆ ರಾಜಿ ಪಂಚಾಯತಿ ಮಾಡಿಕೊಂಡು ಇತ್ಯರ್ಥಗೊಳಿಸುವಂತೆ ಸುಪ್ರೀಂಕೋರ್ಟ್‌ನ ಮತ್ತೊಂದು ಪೀಠವೊಂದು ಕರೆ ನೀಡಿದೆ. ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯ ನ್ಯಾಯಾಲಯದಿಂದ ಹೊರಗೆ ಇತ್ಯರ್ಥಗೊಂಡರೆ ಒಳ್ಳೆಯದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಇಂತಹ ಮಾತುಕತೆಯ ಮಧ್ಯವರ್ತಿಯಾಗಿ ಸಹಕರಿಸಲು ತಾನು ಸಿದ್ಧ ಎಂದು ಪ್ರಧಾನ ನ್ಯಾಯಮೂರ್ತಿ ಜೆ.ಎಸ್.ಖೇಹರ್ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ಸ್ಥಳ ವಿವಾದಕ್ಕೆ ಕಾರಣವಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ಈ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಎರಡು ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ನಂಬರ್ 197- ಲಕ್ಷಾಂತರ ಅನಾಮಧೇಯ ಕರಸೇವಕರ ಬಗ್ಗೆ ಹಾಗೂ ಅಲ್ಲಿದ್ದ ಕಟ್ಟಡದ ದ್ವಂಸಕ್ಕೆ ಸಂಬಂಧಿಸಿದೆ. ಆರೋಪಿಗಳ ವಿರುದ್ಧ ಡಕಾಯಿತಿ, ಕೊಲೆಗೆ ಯತ್ನ, ವಿವಿಧ ಧಾರ್ಮಿಕ ಪಂಗಡಗಳ ನಡುವೆ ದ್ವೇಷಕ್ಕೆ ಉತ್ತೇಜನ ನೀಡಿರುವುದು.. ಇತ್ಯಾದಿ ಆರೋಪ ದಾಖಲಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಲಕ್ನೊ ಕೋರ್ಟ್, ಅಡ್ವಾಣಿ ಸೇರಿದಂತೆ 13 ಮಂದಿಯ ವಿರುದ್ಧದ- ಅಪರಾಧಕ್ಕೆ ಕುಮ್ಮಕ್ಕು ನೀಡಿದ ಆರೋಪವನ್ನು ಕೈಬಿಟ್ಟಿದೆ.

ಎಫ್‌ಐಆರ್ ನಂಬರ್ 198ರಲ್ಲಿ 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಅಶೋಕ್ ಸಿಂಘಾನಿಯಾ, ಗಿರಿರಾಜ್ ಕಿಶೋರ್, ಅಡ್ವಾಣಿ, ಮುರಳಿ ಮನೋಹರ್ ಜೋಷಿ, ವಿಷ್ಣು ಹರಿ ದಾಲ್ಮಿಯಾ , ವಿನಯ್ ಕಟಿಯಾರ್, ಉಮಾ ಭಾರತಿ, ಸಾಧ್ವಿ ರಿತಂಭರಾ ಸೇರಿದ್ದಾರೆ. ಈ ಪ್ರಕರಣ ರಾಯ್‌ಬರೇಲಿಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News