ಕೀಟಭಕ್ಷಕ ಸಸ್ಯ ವೀನಸ್ ಫ್ಲೈಟ್ರಾಪ್‌ಗೆ ತಾನು ಯಾವಾಗ ಮುಚ್ಚಿಕೊಳ್ಳಬೇಕೆಂದು ಗೊತ್ತಾಗುವುದು ಹೇಗೆ?

Update: 2017-03-22 17:55 GMT

ಅಮೆರಿಕದ ಉತ್ತರ ಮತ್ತು ದಕ್ಷಿಣ ಕೆರೋಲಿನಾ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಕಂಡು ಬರುವ,ಡಯೊನಿಯಾ ಮ್ಯುಸುಪುಲಾ ಎಂದೂ ಕರೆಯಲಾಗುವ ಅಪರೂಪದ ಸಸ್ಯ ವೀನಸ್ ಫ್ಲೈಟ್ರಾಪ್ ತಾನು ಬದುಕುಳಿಯಲು ಸಣ್ಣ ಕೀಟಗಳನ್ನು ಭಕ್ಷಿಸುತ್ತದೆ. ಕೀಟಗಳು ಮತ್ತು ಸಣ್ಣ ಜೇಡಗಳು ಅದರ ನೆಚ್ಚಿನ ಆಹಾರವಾಗಿವೆ. ಆದರೆ ತಾನು ಯಾವಾಗ ಮುಚ್ಚಿಕೊಳ್ಳಬೇಕು ಎನ್ನುವುದು ಅದಕ್ಕೆ ಗೊತ್ತಾಗುವುದಾದರೂ ಹೇಗೆ ಎನ್ನುವುದು ನಿಜಕ್ಕೂ ಅಚ್ಚರಿಯೇ ಸರಿ.

ವೀನಸ್ ಫ್ಲೈಟ್ರಾಪ್ ಸಸ್ಯವನ್ನು ನೀವು ಕಡ್ಡಿಯಿಂದ ಸ್ಪರ್ಶಿಸಿ ಅದು ಮುಚ್ಚಿ ಕೊಳ್ಳುವಂತೆ ಮಾಡಬಹುದು, ಆದರೆ ಅದು ತನ್ನ ಜೀರ್ಣಕ್ರಿಯೆಯನ್ನು ಆರಂಭಿಸು ವಂತೆ ಅದನ್ನು ಮೂರ್ಖನನ್ನಾಗಿಸಲು ಸಾಧ್ಯವಿಲ್ಲ.

ಏಕೆಂದರೆ ಪ್ರತಿ ವೀನಸ್ ಫ್ಲೈಟ್ರಾಪ್ ತನ್ನ ಜೀವಿತಾವಧಿಯಲ್ಲಿ ಕೇವಲ ಆರು ಬಾರಿ ಮುಚ್ಚಿಕೊಳ್ಳುತ್ತದೆ. ಹೀಗಾಗಿ ತಾನು ಏನನ್ನು ಜೀರ್ಣಿಸಿಕೊಳ್ಳಬೇಕು ಎನ್ನುವುದನ್ನು ಅದು ನಿರ್ದಿಷ್ಟವಾಗಿ ಗುರುತಿಸಿಕೊಂಡಿರುತ್ತದೆ. ವಾಸ್ತವದಲ್ಲಿ ಕೀಟಗಳನ್ನು ಬಲೆಗೆ ಬೀಳಿಸುವ ಅದರಲ್ಲಿನ ವ್ಯವಸ್ಥೆ ಯೋಗ್ಯ ಆಹಾರ ಮಾತ್ರ ಜೀರ್ಣಕ್ರಿಯೆಗೆ ಚಾಲನೆ ನೀಡುವಂತೆ ರೂಪುಗೊಂಡಿರುತ್ತದೆ.

ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ? ಇದಕ್ಕೆ ಉತ್ತರ ಸಸ್ಯದ ರಚನೆಯಲ್ಲಿಯೇ ಅಡಗಿದೆ.

ಪ್ರತಿ ವೀನಸ್ ಫ್ಲೈಟ್ರಾಪ್ ಸಸ್ಯ ತನ್ನ ಎಲೆಗಳ ಒಳಭಾಗದಲ್ಲಿ ಬಿರುಗೂದಲಿನಂತಹ ರಚನೆಗಳನ್ನು ಹೊಂದಿರುತ್ತದೆ. ಸಸ್ಯವು ಮುಚ್ಚಿಕೊಳ್ಳಬೇಕಾದರೆ ಈ ಬಿರುಗೂದಲುಗಳು 20 ಸೆಕೆಂಡ್‌ಗಳ ಅವಧಿಯಲ್ಲಿ ಎರಡು ಬಾರಿ ವ್ಯತ್ಯಯಕ್ಕೊಳಗಾಗಬೇಕಾಗುತ್ತದೆ. ಎಲೆಗಳ ಮಧ್ಯೆ ಹರಿದಾಡುವ ಕೀಟ ಅಥವಾ ಜೇಡ ಒಂದು ಆಥವಾ ಹೆಚ್ಚಿನ ಬಿರುಗೂದಲುಗಳನ್ನು ಸತತವಾಗಿ ಎರಡು ಬಾರಿ ಸ್ಪರ್ಶಿಸಿದರೆ ಮಾತ್ರ ಅವು ಮುಚ್ಚಿಕೊಳ್ಳುತ್ತವೆ.

ಆದರೆ ಹೀಗೆ ಎರಡು ಬಾರಿ ಬಿರುಗೂದಲುಗಳ ಪ್ರಚೋದನೆಯೂ ವೀನಸ್ ಫ್ಲೈಟ್ರಾಪ್‌ನಲ್ಲಿ ಜೀರ್ಣಕ್ರಿಯೆ ಏಕಾಏಕಿ ಆರಂಭ ಮಾಡುತ್ತದೆ ಎಂದೇನೂ ಇಲ್ಲ. ಒಮ್ಮೆ ಅದರೆ ಹೊರಭಾಗದ ಎಲೆಗಳು ಮುಚ್ಚಿಕೊಂಡ ನಂತರ ಜೀರ್ಣಕ್ರಿಯೆ ಆರಂಭಗೊಳ್ಳಲು ಒಳಗಡೆ ಬಂದಿಯಾಗಿರುವ ಕೀಟದ ಒದ್ದಾಟದಿಂದ ಬಿರುಗೂದಲುಗಳು ಸತತ ಪ್ರಚೋದನೆಗೊಳಬೇಕಾಗುತ್ತದೆ. ಒಳಗಡೆ ನಿಜಕ್ಕೂ ಕೀಟವಿದ್ದರೆ ಸಸ್ಯವು ಅದರ ಸುತ್ತ ತನ್ನ ಬಲೆಯನ್ನು ಬಿಗಿಗೊಳಿಸುತ್ತದೆ ಮತ್ತು ಅದರ ಮೇಲೆ ಜೀರ್ಣರಸಗಳನ್ನು ಸ್ರವಿಸುತ್ತದೆ.
 ನಾವು ವೀನಸ್ ಫ್ಲೈಟ್ರಾಪ್‌ನ ಎಲೆಗಳ ಮೇಲೆ ರಬ್ಬರ ತುಂಡನ್ನೋ ಸಣ್ಣ ಕಲ್ಲನ್ನೋ ಉರುಳಿಸುವ ಮೂಲಕ ಅದು ಮುಚ್ಚಿಕೊಳ್ಳುವಂತೇನೋ ಮಾಡಬಹುದು. ಆದರೆ ಅದು ತನ್ನ ಆಹಾರ ಹೌದೋ ಅಲ್ಲವೋ ಎನ್ನುವುದು ಸಸ್ಯಕ್ಕೆ ತುಂಬ ಚೆನ್ನಾಗಿ ಗೊತ್ತಿರುತ್ತದೆ. ಸಸ್ಯವು ತನ್ನ ಬೇಟೆಯನ್ನು ಹೀರಿಕೊಳ್ಳುವಲ್ಲಿ ಯಶಸ್ವಿಯಾದರೆ ಜೀರ್ಣಕ್ರಿಯೆ ಮುಂದುವರಿಯುತ್ತದೆ ಮತ್ತು ಸಸ್ಯವು ತನ್ನ ಮುಂದಿನ ಬೇಟೆಗಾಗಿ ಪುನಃ ತೆರೆದುಕೊಳ್ಳುತ್ತದೆ......ಕೆಲವು ದಿನಗಳ ನಂತರ.
ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News