‘ಅಧಿಕಾರಿಗಳ ಹಾರಿಕೆಯ ಉತ್ತರ ದಲಿತರನ್ನು ದಿಕ್ಕು ತಪ್ಪಿಸುತ್ತಿದೆ’

Update: 2017-03-22 18:34 GMT

ಪುತ್ತೂರು, ಮಾ.22: ದಲಿತರ ಕುಂದು ಕೊರತೆಗಳನ್ನು ತಿಳಿಸುವಾಗ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿ ದಲಿತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ದಲಿತ ಮುಖಂಡ ಆನಂದ ಬೆಳ್ಳಾರೆ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ದ.ಕ. ಜಿಲ್ಲಾ ಪೊಲೀಸ್ ಇಲಾಖೆ, ಪುತ್ತೂರು ಉಪವಿಭಾಗದ ವತಿಯಿಂದ ಪುತ್ತೂರಿನ ಪುರಭವನದಲ್ಲಿ ಬುಧವಾರ ಡಿವೈಎಸ್ಪಿ ಎನ್,ಜಿ, ಭಾಸ್ಕರ ರೈ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆ ನಡೆಯಿತು.

ಸಭೆೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಿಚಾರವೊಂದಕ್ಕೆ ಸಂಬಂಧಿಸಿದ ಅಧಿಕಾರಿಗಳು ನೀಡಿದ ಉತ್ತರದಿಂದ ತೃಪ್ತರಾಗದ ಅವರು ನಮಗೆ ಹಾರಿಕೆಯ ಉತ್ತರ ನೀಡಬೇಡಿ. ಏನು ಕ್ರಮ ಕೈಗೊಂಡಿದ್ದೀರಿ ಎಂದು ಸ್ಪಷ್ಟ ಪಡಿಸಿ ಎಂದು ಆಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಇರುವ ನೂರಾರು ಎಕರೆ ಡಿ.ಸಿ. ಮನ್ನಾ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವಿಗೆ ಸಂಬಂಧಿಸಿ ಸತತ ಹೋರಾಟ ನಡೆಸುತ್ತಾ, ಮನವಿ ಸಲ್ಲಿಸುತ್ತಾ ಬಂದಿದ್ದರೂ ಕಂದಾಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ನಾಯಕರು ಸಭೆೆಯಲ್ಲಿ ಎಚ್ಚರಿಕೆ ನೀಡಿದರು. ವಿಷಯ ಪ್ರಸ್ತಾಪಿಸಿದ ದಲಿತ ಸೇವಾ ಸಮಿತಿಯ ತಾಲೂಕು ಅಧ್ಯಕ್ಷ ಗಿರಿಧರ್ ನಾಯ್ಕಾ ಇಂತಹ ಸಭೆೆಯಲ್ಲಿ ಪ್ರಸ್ತಾಪಿಸಿದ ಯಾವುದೇ ಕೆಲಸಗಳು ಕಂದಾಯ ಇಲಾಖೆೆಯಿಂದ ಆಗುತ್ತಿಲ್ಲ. ಕಂದಾಯ ಇಲಾಖೆಯಿಂದಲೇ ನಾವು ಭಾರೀ ತೊಂದರೆ ಅನುಭವಿಸಬೇಕಾಗಿ ಬಂದಿದೆ. ಪುತ್ತೂರು ತಾಲೂಕಿನಲ್ಲಿ 47 ಎಕರೆ ಡಿಸಿ ಮನ್ನಾ ಭೂಮಿಯ ಸ್ಥಿತಿಗತಿ ಏನಾಗಿದೆ ಎಂಬ ಬಗ್ಗೆ ತಾಲೂಕು ಕಂದಾಯ ಇಲಾಖೆಯಲ್ಲಿ ಮಾಹಿತಿಯೇ ಇಲ್ಲ ಎಂದು ಆರೋಪಿಸಿದರು. ಪುತ್ತೂರು ತಾಲೂಕಿನಲ್ಲಿ ಡಿಸಿ ಮನ್ನಾ ಭೂಮಿಯ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಈ ಕುರಿತು ಮಾಹಿತಿ ನೀಡುವುದಾಗಿ ತಹಶೀಲ್ದಾರ್ ಅನಂತ ಶಂಕರ್ ತಿಳಿಸಿದರು. ಡಿಸಿ ಮನ್ನಾ ಭೂಮಿ ಎಂದು ಗೊತ್ತಿದ್ದರೂ ನಗರಸಭೆಯಲ್ಲಿ ಮನೆ, ಕಟ್ಟಡ ನಿರ್ಮಿಸಲು ಡೋರ್ ನಂಬರ್ ಕೊಟ್ಟಿದ್ದಾರೆ ಎಂದು ಗಿರಿಧರ್ ನಾಯ್ಕಾ ಆರೋಪಿಸಿದಾಗ ಈ ಕುರಿತು ಪರಿಶೀಲನೆ ನಡೆಸುವುದಾಗಿ ಪೌರಾಯುಕ್ತೆ ರೂಪಾ ಶೆಟ್ಟಿ ಭರವಸೆ ನೀಡಿದರು.

ಆಗ್ರಹ, ಆರೋಪಗಳ ಸುರಿಮಳೆ:

ಪೊಲೀಸ್ ಠಾಣೆಗಳಲ್ಲಿ ಪ್ರತಿಯೊಂದು ದೂರಿಗೆ ಪ್ರತಿದೂರು ದಾಖಲಿಸುವ ಕೆಲಸಗಳಾಗುತ್ತಿದ್ದು, ಈ ಬಗ್ಗೆ ಪೊಲೀಸರು ಗಮನಹರಿಸಬೇಕು. ಉಪ್ಪಿನಂಗಡಿ ಠಾಣೆಗೆ ಪೂರ್ಣಕಾಲಿಕ ಎಸ್ಸೈ ನೇಮಕ ಮಾಡಬೇಕು. ಉಪ್ಪಿನಂಗಡಿ ಠಾಣೆಯಲ್ಲಿ ಕುಂದುಕೊರತೆ ಸಭೆೆಗಳು ಪ್ರತೀ ತಿಂಗಳು ಸಮರ್ಪಕವಾಗಿ ನಡೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಪೂರ್ಣಿಮಾ ಎಂಬವರಿಗೆ ಮನೆ ಮಂಜೂರು ಮಾಡಿದ್ದರೂ ಇದೀಗ ರಸ್ತೆ ಮಾರ್ಜಿನ್ ನೆಪವೊಡ್ಡಿ ಬಿಲ್ ಪಾವತಿಸದೆ ಸತಾಯಿಸುತ್ತಿದ್ದಾರೆ. ಈ ರೀತಿ ತಾರತಮ್ಯ ಮಾಡುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗಿರಿಧರ ನಾಯ್ಕಾ ಆಗ್ರಹಿಸಿದರು.

   ಪರೀಕ್ಷೆಯ ಸಮುಯವಾಗಿರುವ ಈ ಸಂದಭರ್ ಮೆಸ್ಕಾಂ ಇಲಾಖೆಯವರು ಬಿಲ್ ಬಾಕಿಯಿರಿಸಿರುವ ನೆಪದಲ್ಲಿ ದಲಿತ ಕಾಲನಿಗಳ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದು, ಈ ರೀತಿ ಮಾಡದೆ ಕಂತಿನಲ್ಲಿ ಬಿಲ್ ಪಾವತಿಸಲು ಅವಕಾಶ ನೀಡಬೇಕು ಎಂದು ಸುಳ್ಯದ ದಲಿತ ಸಂಘಟನೆಯ ಸಂಚಾಲಕ ವಿಜಯಕುಮಾರ್ ಆಗ್ರಹಿಸಿದರು. ಕಬಕ ಗ್ರಾಮದಲ್ಲಿ 18 ಎಕ್ರೆ ಪಟ್ಟಾ ಜಾಗವಿರುವ ವ್ಯಕ್ತಿಯೊಬ್ಬರಿಗೆ ಅಕ್ರಮ ಸಕ್ರಮದಲ್ಲಿ 3.62 ಎಕರೆ ಜಮೀನು ನೀಡಿರುವುದು ಸರಿಯೇ ಎಂದು ಗಿರಿಧರ್ ನಾಯ್ಕ್ಕಿ ಪ್ರಶ್ನಿಸಿ, ಅದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು. ನೆಲ್ಲಿಗುಂಡಿ ದಾರಿ ವಿವಾದ: ಪುತ್ತೂರು ನಗರ ವ್ಯಾಪ್ತಿಯ ನೆಲ್ಲಿಗುಂಡಿ ಎಂಬಲ್ಲಿ ದಾರಿ ವಿವಾದದ ವಿಚಾರದಲ್ಲಿ ನಡೆದ ದಲಿತರೊಳಗಿನ ಗಲಾಟೆಗೆ ಸಂಬಂಧಿಸಿ ಸುದೀರ್ಘ ಚರ್ಚೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ತಾಕೀತು: ಪುತ್ತೂರು ತಾಲೂಕಿನ ಬಲ್ಯ ಗ್ರಾಮದಲ್ಲಿನ ದಲಿತ ಕಾಲನಿಯ 26 ಕುಟುಂಬಗಳು ಕುಡಿಯಲು ನೀರಿಲ್ಲದೆ ಅಲೆದಾಡುವ ಸ್ಥಿತಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕ್ರಮಕೈಗೊಳ್ಳುತ್ತಿಲ್ಲ ಎಂದು ಗಿರಿಧರ್ ನಾಯ್ಕಿ ಆರೋಪಿಸಿದಾಗ ಸಭೆೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ ಇದು ತನ್ನ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದಿದ್ದು, ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುವುದು ಬೇಡ, ನಾಟಕವಾಡುತ್ತಾ, ಸಮಜಾಯಿಷಿಕೆಯ ಉತ್ತರ ನೀಡಿ ದಲಿತರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಆನಂದ ಬೆಳ್ಳಾರೆ ತಾಕೀತು ಮಾಡಿದರು.

ಈ ಸಂದರ್ಭ ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ನಗರಸಭೆಯ ಆಯುಕ್ತೆ ರೂಪಾ ಶೆಟ್ಟಿ, ನಗರ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಗ್ರಾಮಾಂತರ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಕುಲಕರ್ಣಿ, ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್, ಪುತ್ತೂರು ಗ್ರಾಮಾಂತರ ಸಂಪ್ಯ ಠಾಣೆ ಎಸ್ಸೈ ಅಬ್ದುಲ್ ಖಾದರ್, ನಗರ ಸಂಚಾರ ಠಾಣೆಯ ಎಸ್ಸೈ ವಿಠಲ ಶೆಟ್ಟಿ, ತಾಪಂ ಕಚೇರಿ ವ್ಯವಸ್ಥಾಪಕ ಶಿವಪ್ರಕಾಶ್ ಅಡ್ಪಂಗಾಯ ಉಪಸ್ಥಿತರಿದ್ದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News