ಮನಪಾದಿಂದ ನೀರಿನ ಅಭಾವದ ಭೀತಿ ಸೃಷ್ಟಿ: ಆರೋಪ

Update: 2017-03-22 18:39 GMT

ಮಂಗಳೂರು, ಮಾ.22: ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದಿನನಿತ್ಯ ಸರಬರಾಜನ್ನು ಮಂಗಳೂರು ಮಹಾನಗರ ಪಾಲಿಕೆ ಕಡಿತಗೊಳಿಸಿದೆ. 36ಗಂಟೆಗಳಿಗೊಮ್ಮೆ ನೀರು ಬಿಡಲಾಗುವುದೆಂದು ಘೋಷಣೆ ಮಾಡಿದೆ. ವಾಸ್ತವದಲ್ಲಿ ಜನತೆಗೆ ನೀರು ದೊರಕುತ್ತಿರುವುದು ಮೂರು ದಿನಕ್ಕೊಮ್ಮೆ ಮಾತ್ರ. ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಶೇಖರಣೆ ಉತ್ತಮವಾಗಿದ್ದರೂ ಮಹಾನಗರ ಪಾಲಿಕೆ ಜನತೆಯಲ್ಲಿ ನೀರಿನ ಅಭಾವದ ಭೀತಿಯನ್ನು ಸೃಷ್ಟಿಸಿ ಜನರನ್ನು ಕುಡಿಯುವ ನೀರಿನಿಂದ ವಂಚಿಸಿ ಸಂಕಷ್ಟಕ್ಕೀಡು ಮಾಡುತ್ತಿದೆ ಎಂದು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆಯ ವೆಂಟೆಡ್ ಡ್ಯಾಂನಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಹಳೆಯ ಅಣೆಕಟ್ಟು ತುಂಬಿ ತುಳುಕಿದ್ದು, ಹೊಸ ಅಣೆಕಟ್ಟಿನಲ್ಲಿ ಕೂಡ 5 ಮೀ. ಎತ್ತರಕ್ಕೆ ನೀರು ತುಂಬಿದೆ. ಈ ಬಾರಿ ಹೊಸ ಡ್ಯಾಂ ಕಾರ್ಯಾರಂಭ ಮಾಡಿದೆ. ಹಳೆಯ ಡ್ಯಾಂ ಕೂಡ ನೀರಿನಿಂದ ತುಂಬಿದೆ. ಈ ಮಟ್ಟಿನ ನೀರಿನ ಸಂಗ್ರಹ ಇರುವಾಗಲೂ ಒಳಹರಿವು ನಿಂತಿರುವ ನೆಪ ಮುಂದಿಟ್ಟು ಜನತೆಗೆ ಕುಡಿಯುವ ನೀರು ವಂಚಿಸುತ್ತಿರುವುದು ಮಹಾ ನಗರ ಪಾಲಿಕೆಯ ಅವೈಜ್ಞಾನಿಕ ಕಣ್ಣೋಟ ಮತ್ತು ಜನವಿರೋಧಿ ನೀತಿಯನ್ನು ಎತ್ತಿತೋರಿಸುತ್ತದೆ. ಡ್ಯಾಂಗಳಲ್ಲಿ ಈಗ ಸಂಗ್ರಹಗೊಂಡಿರುವ ನೀರನ್ನು ಕನಿಷ್ಠ 75ರಿಂದ 80 ದಿನಗಳ ಕಾಲ ಪ್ರತಿ ದಿನವೂ ಪೂರೈಸಬಹುದು. ಹೀಗಿರುವಾಗ ಕುಡಿಯುವ ನೀರಿಗೆ ರೇಷನ್ ವ್ಯವಸ್ಥೆ ಮಾಡುವ ಆವಶ್ಯಕತೆಯೇ ಇರಲಿಲ್ಲ. ಮಹಾನಗರ ಪಾಲಿಕೆ 36 ಗಂಟೆಗೊಮ್ಮೆ ನೀರು ವಿತರಿಸಲಾಗುವುದು ಎಂದು ಸಾರ್ವಜನಿಕ ಪ್ರಕಟನೆಯಲ್ಲಿ ಘೋಷಿಸಿದ್ದರೂ ಮೂರು ದಿನಕ್ಕೊಮ್ಮೆಯಷ್ಟೆ ನೀರು ಸರಬರಾಜು ಮಾಡಲಾಗುತ್ತಿದೆ. ಕೈಗಾರಿಕೆಗಳಿಗೆ ಮಾತ್ರ ಬೇಕಾದಷ್ಟು ನೀರನ್ನು ಬಳಸಲು ಅವಕಾಶ ಕೊಟ್ಟು, ಜನತೆಯನ್ನು ಕುಡಿಯುವ ನೀರಿನಿಂದ ವಂಚಿಸುವ ಹುನ್ನಾರ ನಗರಪಾಲಿಕೆಯ ಈ ತೀರ್ಮಾನದ ಹಿಂದಿದೆ ಎಂದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಜಿಲ್ಲಾಡಳಿತ ಈ ಕುರಿತು ತಕ್ಷಣ ಮಧ್ಯ ಪ್ರವೇಶ ಮಾಡಬೇಕು, ನಗರ ಪಾಲಿಕೆ ನೀರು ಸರಬರಾಜಿನ ಮೇಲೆ ಹೇರಿರುವ ನಿರ್ಬಂಧ ತೆಗೆದು ಹಾಕಿ ಶೇಖರಣೆಯಲ್ಲಿರುವ ನೀರನ್ನು ನಿಯಮಿತವಾಗಿ ಜನತೆಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News