ಮದ್ರಸ ಶಿಕ್ಷಕನ ಹತ್ಯೆ ಪ್ರಕರಣ: ತನಿಖೆ ತೀವ್ರ

Update: 2017-03-22 18:45 GMT

ಕಾಸರಗೋಡು, ಮಾ.22: ಮದ್ರಸ ಶಿಕ್ಷಕ ಮಡಿಕೇರಿಯ ರಿಯಾಝ್ ವೌಲವಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಅಪರಾಧ ಪತ್ತೆದಳದ ಮುಖ್ಯಸ್ಥ ಡಾ.ಎ. ಶ್ರೀನಿವಾಸ್ ನೇತೃತ್ವದ ತನಿಖಾ ತಂಡವು ಕಾಸರಗೋಡಿಗೆ ಆಗಮಿಸಿ ತನಿಖೆ ನಡೆಸುತ್ತಿದೆ.

ಕೃತ್ಯ ನಡೆದ ಹಳೆ ಚೂರಿ ಮುಹಿಯುದ್ದೀನ್ ಜುಮಾ ಮಸೀದಿ ಪರಿಸರದಲ್ಲಿ ಬುಧವಾರ ತನಿಖಾ ತಂಡವು ತಪಾಸಣೆ ನಡೆಸಿತು. ಮಸೀದಿಯ ಪದಾಧಿಕಾರಿಗಳು ಮತ್ತು ಘಟನೆ ನಡೆಯುವ ಸಂದರ್ಭ ಮಸೀದಿಯಲ್ಲಿದ್ದ ಖತೀಬ್ ಅಬ್ದುಲ್ ಅಝೀಝ್ ಮುಸ್ಲಿಯಾರ್‌ರಿಂದ ಮಾಹಿತಿ ಕಲೆ ಹಾಕಿತು. ಅಂದು ರಾತ್ರಿ ಕಾಸರಗೋಡು, ಚೂರಿ ಪರಿಸರದ ಮೊಬೈಲ್ ಟವರ್ ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಕಾಸರಗೋಡು ನಗರ ಹಾಗೂ ಹೊರವಲಯದಲ್ಲಿರುವ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.

ಹಂತಕರು ಯಾವ ದಾರಿಯಾಗಿ ಮಸೀದಿ ಆವರಣದೊಳಗೆ ಪ್ರವೇಶಿಸಿದರು ಎಂಬುದರತ್ತ ತನಿಖಾ ತಂಡ ಗಮನ ನೆಟ್ಟಿದೆ. ಮಸೀದಿಗೆ ಬರಲು ಐದು ದಾರಿಗಳಿರುವುದರಿಂದ ಇದು ಸ್ಪಷ್ಟಗೊಳ್ಳಬೇಕಿದೆ. ಕೃತ್ಯಕ್ಕೆ ಸಂಬಂಧಪಟ್ಟಂತೆ ಇದುವರೆಗೆ 27 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಎರಡು ಕೊಲೆ ಪ್ರಕರಣದ ಆರೋಪಿ ಯುವಕನೊಬ್ಬನನ್ನು ಕೇಂದ್ರೀಕರಿಸಿ ಇದೀಗ ತನಿಖೆ ನಡೆಯುತ್ತಿದೆ. ತಡರಾತ್ರಿ ಬೈಕ್‌ನಲ್ಲಿ ಅಲೆದಾಡುತ್ತಿದ್ದವರನ್ನು ಕೇಂದ್ರೀಕರಿಸಿ ನಿಗಾ ಇರಿಸಲಾಗಿದೆ.
ಕಣ್ಣೂರು ಐ.ಜಿ.ಮಹಿಪಾಲ್ ಯಾದವ್ ಮೇಲುಸ್ತುವಾರಿಯಲ್ಲಿ ತನಿಖೆ ಮುಂದುವರಿದಿದೆ.

ಸೋಮವಾರ ನಡೆದ ಅಹಿತಕರ ಘಟನೆಗೆ ಸಂಬಂಧಪಟ್ಟಂತೆ ಕಾಸರಗೋಡು ನಗರ ಠಾಣಾ ಪೊಲೀಸರು ಒಂಬತ್ತು ಪ್ರಕರಣಗಳನ್ನು ದಾಖಲಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 18 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಹಿತಕರ ಘಟನೆ ಮರುಕಳಿಸದಂತೆ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News