ಈ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆಯೇ?

Update: 2017-03-22 18:52 GMT

ಮಾನ್ಯರೆ,

ತಮ್ಮ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಉತ್ತರಪ್ರದೇಶ ವಿಧಾನಸಭೆಯಲ್ಲಿನ ಬಿಜೆಪಿಯ ಎಲ್ಲಾ 312 ಶಾಸಕರಿಗೆ ಕೊನೆಯ ಕ್ಷಣದವರೆಗೂ ಸುಳಿವು ಇರಲಿಲ್ಲ ಎಂಬ ಸುದ್ದಿ ಆಘಾತಗೊಳಿಸುವಂತಹದ್ದು. ಮುಚ್ಚಿದ ಲಕೋಟೆಯಲ್ಲಿ ಮುಖ್ಯಮಂತ್ರಿಯ ಹೆಸರು ದಿಲ್ಲಿಯಿಂದ ಬರುತ್ತದೆ ಎಂದು ಕಾಂಗ್ರೆಸ್‌ನವರನ್ನು ಗೇಲಿ ಮಾಡುತ್ತಿದ್ದ ಬಿಜೆಪಿಯವರು ಈಗ ತಾವು ಮಾಡಿದ್ದೇನು? ಬಿಜೆಪಿ ಮುಖ್ಯಮಂತ್ರಿಯ ಹೆಸರು ಮಾತ್ರವಲ್ಲ ಉಪಮುಖ್ಯಮಂತ್ರಿ ಹಾಗೂ ಇತರ ಸಚಿವರ ಹೆಸರುಗಳೂ ನಾಗಪುರದ ಆರೆಸ್ಸೆಸ್ ಹೆಡ್ ಆಫೀಸಿನಿಂದಲೇ ಬರುತ್ತದೆ ಎನ್ನುವುದು ನಿಜವಾಯಿತು ತಾನೇ.

ಕಾಂಗ್ರೆಸ್ಸಿನಲ್ಲಿ ಕಡೇ ಪಕ್ಷ ಅದೇ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಯನ್ನು ಆರಿಸುತ್ತದೆ. ಆದರೆ ಬಿಜೆಪಿಯ ವಿಷಯದಲ್ಲಿ ಪಕ್ಷದ ಹೊರಗಿನವರಾದ ಆರೆಸ್ಸೆಸ್‌ನವರು ದೂರದ ನಾಗಪುರದಲ್ಲಿ ಕುಳಿತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯನ್ನು ಆರಿಸುವುದು! ಉತ್ತರ ಪ್ರದೇಶದಂತಹ ಅತಿ ದೊಡ್ಡ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಾಸನೆ ಸಹ ಆ ಪಕ್ಷದ ಎಲ್ಲಾ 312 ಶಾಸಕರಿಗೆ ಇರಲಿಲ್ಲ ಎಂದರೆ ಆ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ? ಜನಪ್ರತಿನಿಧಿಗಳಾದವರಿಗೆ ತಮ್ಮ ನಾಯಕನನ್ನು ಆಯ್ಕೆ ಮಾಡಲಾರದಂತಹ ಸ್ಥಿತಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂದಿರುವುದು ನಿಜಕ್ಕೂ ಶೋಚನೀಯ. ಕಾಂಗ್ರೆಸ್ ಮಾಡಿದ್ದ ಎಲ್ಲಾ ತಪ್ಪುಗಳನ್ನೂ ಬಿಜೆಪಿ ಕೂಡಾ ಮಾಡಿ ತಾನು ಕಾಂಗ್ರೆಸ್ಸಿಗಿಂತ ಭಿನ್ನವೇನೂ ಅಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ.

Writer - -ಆರ್. ಬಿ. ಶೇಣವ, ಮಂಗಳೂರು

contributor

Editor - -ಆರ್. ಬಿ. ಶೇಣವ, ಮಂಗಳೂರು

contributor

Similar News