ಯಾದವ ಹೆಸರಿನ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ: ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಗಂಭೀರ ಆರೋಪ

Update: 2017-03-23 11:32 GMT

ಲಕ್ನೋ, ಮಾ.23: ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಯಾದವ ಸರ್‌ನೇಮ್ ಹೊಂದಿರುವ ಪೊಲೀಸರನ್ನು ಗುರಿಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಐಪಿಎಸ್ ಅಧಿಕಾರಿಯೊಬ್ಬರು ಗಂಭೀರ ಆರೋಪ ಮಾಡಿರುವುದು ವಿವಾದದ ಕಿಡಿ ಹೊತ್ತಿಸಿದೆ. 2010ನೆ ಬ್ಯಾಚ್ ಐಎಎಸ್ ಅಧಿಕಾರಿ ಸರಣಿ ಟ್ವೀಟ್ ಮೂಲಕ ಈ ಆರೋಪ ಮಾಡಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಹಿಮಾಂಶು ಕುಮಾರ್ ಅವರು ತಮ್ಮ ಟ್ವೀಟ್‌ಗಳನ್ನು ಡಿಜಿಪಿ ಅವರಿಗೂ ಟ್ಯಾಗ್ ಮಾಡಲಾಗಿದ್ದು, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಬೆಂಬಲಿಗರು ಎಂಬ ಹಣೆಪಟ್ಟಿ ಕಟ್ಟಿ ಈ ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ. ಡಿಜಿಪಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಹಿಮಾಂಶು, ಆ ಟ್ವೀಟ್ ಕಿತ್ತುಹಾಕಿದ್ದಾರೆ.

ಆದರೆ ಇದಕ್ಕೆ ಬೆಂಬಲವಾಗಿ ಬಂದ ಅಭಿಪ್ರಾಯಗಳನ್ನು ಮರು ಟ್ವೀಟ್ ಮಾಡುತ್ತಿದ್ದಾರೆ. ಬೆಳಿಗ್ಗೆ ಮಾಡಿದ ಮೊದಲ ಟ್ವೀಟ್‌ನಲ್ಲಿ ಅವರು, "ಯಾದವ್ ಸರ್‌ನೇಮ್ ಹೊಂದಿರುವ ಪೊಲೀಸ್ ಸಿಬ್ಬಂದಿಯನ್ನು ವಿವಿಧ ಕಾರಣ ನೀಡಿ ಅಮಾನತು ಮಾಡಲು/ ವರ್ಗಾಯಿಸಲು ಹಿರಿಯ ಅಧಿಕಾರಿಗಳು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ" ಎಂದು ದೂರಿದ್ದರು.

ಆದರೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ಬಿಜೆಪಿ ಸರಕಾರ ಯಾವುದೇ ಪೊಲೀಸ್ ವರ್ಗಾವಣೆಗೆ ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎರಡನೇ ಪೋಸ್ಟ್‌ನಲ್ಲಿ ಜಾತಿ ಹೆಸರಿನಲ್ಲಿ ಶಿಕ್ಷಿಸಲು ಡಿಜಿಪಿ ಕಚೇರಿ ಏಕೆ ಒತ್ತಡ ತರುತ್ತಿದೆ ಎಂದು ಪ್ರಶ್ನಿಸಿದ್ದರು. ಈ ಪೈಕಿ ಕೆಲ ಟ್ವೀಟ್‌ಗಳನ್ನು ಮುಖ್ಯಮಂತ್ರಿಯ ಅಧಿಕೃತ ಟ್ವೀಟರ್ ಹ್ಯಾಂಡಲ್‌ಗೆ ಕೂಡಾ ಟ್ಯಾಗ್ ಮಾಡಲಾಗಿದೆ.

ಫಿರೋಜಾಬಾದ್ ಎಸ್ಪಿ ಆಗಿದ್ದ ಕುಮಾರ್ ಅವರನ್ನು ಚುನಾವಣೆ ಬಳಿಕ ವರ್ಗಾಯಿಸಿ ಡಿಜಿಪಿ ಕೇಂದ್ರ ಕಚೇರಿಯ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರಸ್ತುತ ಕುಮಾರ್ ವೈದ್ಯಕೀಯ ರಜೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News