×
Ad

ದಿಲ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಹೆಲ್ಮೆಟ್ ಧರಿಸಿದ ವೈದ್ಯರು !

Update: 2017-03-23 10:42 IST

ಹೊಸದಿಲ್ಲಿ, ಮಾ.23: ಮಹಾರಾಷ್ಟ್ರ ರಾಜ್ಯದಾದ್ಯಂತ ಕಿರಿಯ ವೈದ್ಯರು ತಮ್ಮ ಸಹೋದ್ಯೋಗಿಗಳ ಮೇಲೆ ರೋಗಿಗಳ ಸಂಬಂಧಿಗಳಿಂದ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ವಿರೋಧಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೆ ಅವರಿಗೆ ಬೆಂಬಲಾರ್ಥವಾಗಿ ಬುಧವಾರದಂದು ರಾಜಧಾನಿಯ ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಇಲ್ಲಿನ ಸುಮಾರು 1,200 ವೈದ್ಯರು ಹೆಲ್ಮೆಟ್ ಧರಿಸಿ ಕರ್ತವ್ಯಕ್ಕೆ ಹಾಜರಾದರು.

ತಮ್ಮ 'ಸೇವ್‌ದಿಸೇವಿಯರ್ಸ್' ಅಭಿಯಾನದಂಗವಾಗಿ ತಮಗೆ ಕರ್ತವ್ಯದ ಸ್ಥಳದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಬೇಕೆಂದು ಅವರು ಆಗ್ರಹಿಸಿದರು.

‘‘ವೈದ್ಯರುಗಳಿಗೆ ರೋಗಿಗಳ ಸಂಬಂಧಿಗಳಿಂದ ಹಲ್ಲೆಯಾದಾಗ ಅವರಿಗೆ ಯಾರೂ ಕರುಣೆ ತೋರಿಸುವುದಿಲ್ಲ. ಇಂತಹ ವೈದ್ಯರಿಗೆ ಪರಿಹಾರ ದೊರೆಯಲೂ ಯಾರೂ ಪ್ರಯತ್ನಿಸುತ್ತಿಲ್ಲ. ಬದಲಾಗಿ ವೈದ್ಯರ ಮೇಲೆಯೇ ದಂಡ ಹೇರಲಾಗುತ್ತದೆ’’ ಎಂದು ಏಮ್ಸ್ ನ ರೆಸಿಡೆಂಟ್ ವೈದ್ಯರ ಸಂಘದ ಅಧ್ಯಕ್ಷ ವಿಜಯ್ ಗುರ್ಜರ್ ಹೇಳಿದ್ದಾರೆ.

ತರುವಾಯ ದಿಲ್ಲಿಯ ಪ್ರಮುಖ ಸರಕಾರಿ ಆಸ್ಪತ್ರೆಗಳ ಸುಮಾರು 20,000 ವೈದ್ಯರು ತಮ್ಮ ಮುಂಬೈ ಸಹೋದ್ಯೋಗಿಗಳಿಗೆ ಬೆಂಬಲ ಸೂಚಿಸಿ ಗುರುವಾರದಂದು ಸಾಮೂಹಿಕ ರಜೆಯ ಮೇಲೆ ತೆರಳಿದ್ದು ಇದರಿಂದ ಹೆಚ್ಚಿನೆಡೆ ರೋಗಿಗಳ ಸೇವೆಗೆ ತಡೆಯುಂಟಾಗಿದೆ.

ಮಹಾರಾಷ್ಟ್ರ ವೈದ್ಯರ ಪ್ರತಿಭಟನೆಯನ್ನು ಖಂಡಿಸಿರುವ ಬಾಂಬೆ ಹೈಕೋರ್ಟ್ ಅವರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲವಾದರೆ ರಾಜೀನಾಮೆ ನೀಡಬೇಕು ಎಂದು ಹೇಳಿದೆ. ಆದರೆ ವೈದ್ಯರ ಸಂಘ ಮಾತ್ರ ತನ್ನ ಪಟ್ಟು ಸಡಿಲಿಸಿಲ್ಲ. ಸರಕಾರಕ್ಕೆ ವೈದ್ಯರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲವೆಂದಾದರೆ ಅದು ರಾಜೀನಾಮೆ ನೀಡಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News