ನಾಲ್ಕು ವರ್ಷದಿಂದ ಸ್ವಯಂ ಗೃಹಬಂಧನದಲ್ಲಿದ್ದ ತಾಯಿ-ಮಗಳ ರಕ್ಷಣೆ

Update: 2017-03-23 06:02 GMT

ಹೊಸದಿಲ್ಲಿ, ಮಾ.23: ಸುಮಾರು ನಾಲ್ಕು ವರ್ಷಗಳಿಂದ ಸ್ವಯಂ ಗೃಹಬಂಧನದಲ್ಲಿದ್ದ ತಾಯಿ ಹಾಗೂ ಮಗಳನ್ನು ದಿಲ್ಲಿ ಪೊಲೀಸರು ರಕ್ಷಿಸಿದ್ದಾರೆ.

ನೈಋತ್ಯ ದಿಲ್ಲಿಯ ಮಹಾವೀರ ಎಕ್‌ಕ್ಲೇವ್‌ನಲ್ಲಿ ಈ ಮನಕಲಕುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ತಾಯಿ-ಮಗಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ.

42ರ ಹರೆಯದ ಕಲಾವತಿ ಹಾಗೂ ಅವರ 20ರ ಹರೆಯದ ಮಗಳು ದೀಪಾ ತಮ್ಮ ಮನೆಯ ಮೊದಲ ಮಾಳಿಗೆಯ ರೂಮ್‌ನಲ್ಲಿ ಬಾಗಿಲು ಹಾಕಿಕೊಂಡು ಸ್ವಯಂ ಗೃಹಬಂಧನದಲ್ಲಿರುವ ಬಗ್ಗೆ ನೆರೆಮನೆಯವರು ದಿಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಇದು ಬೆಳಕಿಗೆ ಬಂದಿದೆ. ನಾವು ಇಬ್ಬರನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

 ತಾಯಿ-ಮಗಳ ಜೊತೆ ವಾಸವಾಗಿದ್ದ ಮಹಿಳೆಯ ಮಾವನನ್ನು ವಿಚಾರಣೆ ನಡೆಸಲಾಗುತ್ತಿದೆ. ನಾವು ಸ್ಥಳಕ್ಕೆ ತೆರಳಿದಾಗ ಕೊಠಡಿಯ ಬಾಗಿಲು ತೆರೆದಿತ್ತು. ಮಹಿಳೆ ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಅತ್ಯಂತ ಅನಾರೋಗ್ಯಕರ ಸ್ಥಿತಿಯಲ್ಲಿದ್ದರು. ಮಹಿಳೆ ಪೊಲೀಸರೊಂದಿಗೆ ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರು. ತಾಯಿ-ಮಗಳು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಭ್ರಮಾಲೋಕದಲ್ಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಲಾವತಿಯ ಮಾವ ಮಹಾವೀರ್ ಮಿಶ್ರಾ ಪಕ್ಕದ ರೂಮ್‌ನಲ್ಲಿ ವಾಸವಾಗಿದ್ದು, ತಾಯಿ-ಮಗಳು ಆಹಾರ ಕೇಳಿದಾಗ ಮಾತ್ರ ಕೊಡುತ್ತಿದ್ದರು.

ತನ್ನ ಪತ್ನಿ 2000ರಲ್ಲಿ ಸಾವನ್ನಪ್ಪಿದ್ದರು. ನಾಲ್ಕು ವರ್ಷಗಳ ಹಿಂದೆ ಇಬ್ಬರು ಪುತ್ರರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ನಂತರ ಕಲಾವತಿ ಹಾಗೂ ದೀಪಾ ಕೊಠಡಿಯ ಬಾಗಿಲು ಹಾಕಿಕೊಂಡು ಸ್ವಯಂ ಗೃಹಬಂಧನದಲ್ಲಿದ್ದಾರೆ ಎಂದು ಮಿಶ್ರಾ ಪೊಲೀಸರಿಗೆ ತಿಳಿಸಿದ್ದಾರೆ.

ಮಿಶ್ರಾ ಎಂಟಿಎನ್‌ಎಲ್‌ನಲ್ಲಿ ಲೈನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದರು. ಮಿಶ್ರಾಗೆ ಬರುತ್ತಿರುವ ಪಿಂಚಣಿ ಹಣದಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು. ನನ್ನ ಸೊಸೆ ಮಾನಸಿಕವಾಗಿ ಅಸ್ವಸ್ಥರಾಗಿದ್ದು,ಆಹಾರವನ್ನ ಸರಿಯಾಗಿ ಸೇವಿಸುತ್ತಿರಲಿಲ್ಲ. ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ದಾಖಲಿಸುವಷ್ಟು ಶಕ್ತಿ ನನ್ನಲ್ಲಿರಲಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News