ಪನ್ನೀರ್‌ ಸೆಲ್ವಂಗೆ ‘ವಿದ್ಯುತ್ ಕಂಬ’, ಶಶಿಕಲಾಗೆ ‘ಟೋಪಿ’

Update: 2017-03-23 07:59 GMT

ಹೊಸದಿಲ್ಲಿ, ಮಾ.23: ಎರಡು ಎಲೆಯಿರುವ ಪಕ್ಷದ ಚಿಹ್ನೆಗಾಗಿ ಪೈಪೋಟಿ ನಡೆಸುತ್ತಿರುವ ಎಐಎಡಿಎಂಕೆ ಪಕ್ಷದ ಎರಡು ಬಣಗಳಿಗೆ ಚುನಾವಣಾ ಆಯೋಗ ಗುರುವಾರ  ಪ್ರತ್ಯೇಕ ಚುನಾವಣೆ ಚಿಹ್ನೆಯನ್ನು ಘೋಷಿಸಿದೆ.

 ಮುಂಬರುವ ರಾಧಾಕೃಷ್ಣ ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲಿರುವ ಒ. ಪನ್ನೀರ್‌ಸೆಲ್ವಂ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗ ‘ವಿದ್ಯುತ್‌ಕಂಬ’ದ ಚಿಹ್ನೆ ನೀಡಿದೆ. ಶಶಿಕಲಾ ಬಣಕ್ಕೆ ‘ಟೋಪಿ’ಯ ಚಿಹ್ನೆ ನೀಡಿದೆ.

ಸೆಲ್ವಂ ಬಣ ‘ಎಐಎಡಿಎಂಕೆ ಪುರಚಿ ತಲೈವಿ ಅಮ್ಮಾ’ ಹೆಸರಿನಲ್ಲಿ ‘ವಿದ್ಯುತ್ ಕಂಬದ’ಚಿಹ್ನೆಯೊಂದಿಗೆ ಸ್ಪರ್ಧೆಗಿಳಿದರೆ, ಶಶಿಕಲಾ ಬಣ ‘ಎಐಎಡಿಎಂಕೆ ಅಮ್ಮಾ’ ಹೆಸರಿನಲ್ಲಿ ‘ಟೋಪಿ’ ಚಿಹ್ನೆಯೊಂದಿಗೆ ಮತದಾರರ ಮುಂದೆ ಹೋಗಲಿದೆ.

ಎಐಎಡಿಎಂಕೆ ಮಾಜಿ ಮುಖ್ಯಸ್ಥೆ ಜೆ. ಜಯಲಲಿತಾರ ಉತ್ತರಾಧಿಕಾರಿಯಾಗಲು ತೀವ್ರ ಪೈಪೋಟಿ ಏರ್ಪಟ್ಟಿದ್ದು, ಎರಡು ಬಣಗಳ ಪ್ರತಿನಿಧಿಯ ಸಭೆ ನಡೆಸಿದ ಚುನಾವಣೆ ಆಯೋಗ ಪ್ರತ್ಯೇಕ ಚಿಹ್ನೆ ನೀಡಲು ನಿರ್ಧರಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಾಜಿ ಸಿಎಂ ಜಯಲಲಿತಾ ನಿಧನರಾದ ಬಳಿಕ ಆರ್‌.ಕೆ. ನಗರ ಕ್ಷೇತ್ರ ತೆರವಾಗಿದ್ದು, ಎಪ್ರಿಲ್ 12 ರಂದು ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಿಗದಿಯಾಗಿದೆ. ಎ.15 ರಂದು ಮತ ಎಣಿಕೆ ನಡೆಯಲಿದೆ.

ಎಐಎಡಿಎಂಕೆಯ ಎರಡೂ ಬಣಗಳಿಗೆ ಆರ್‌.ಕೆ. ನಗರ ಕ್ಷೇತ್ರ ಪ್ರತಿಷ್ಠಿತ ಕಣವಾಗಿದ್ದು, ಸೆಲ್ವಂ ಬಣ ಪಕ್ಷದ ಹಿರಿಯ ಮುಖಂಡ ಇ.ಮಧುಸೂದನನ್‌ರನ್ನು ಕಣಕ್ಕಿಳಿಸಿದೆ. ಶಶಿಕಲಾ ಬಣ ಟಿಟಿವಿ ದಿನಕರನ್‌ರನ್ನು ಸ್ಪರ್ಧೆಗೆ ಇಳಿಸಿದೆ. ದಿನಕರನ್ ಅವರು ಶಶಿಕಲಾರ ಅಳಿಯ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News