ಬಾಬ್ರಿ ಮಸೀದಿ ದ್ವಂಸ ಪ್ರಕರಣ: ವಿಚಾರಣೆ 2 ವಾರ ಮುಂದೂಡಿದ ಸುಪ್ರೀಂ

Update: 2017-03-23 08:36 GMT

ಹೊಸದಿಲ್ಲಿ, ಮಾ.23: ಬಿಜೆಪಿ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಇತರ ಆರೋಪಿಗಳಿಗೆ ತಮ್ಮ ಲಿಖಿತ ಹೇಳಿಕೆ ಸಲ್ಲಿಸುವಂತೆ ಸೂಚಿಸಿರುವ ಸುಪ್ರೀಂಕೋರ್ಟ್ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಗುಂಪುಗಳು ಎಪ್ರಿಲ್ 6 ರಂದು ಲಿಖಿತ ವಾದವನ್ನು ಸಲ್ಲಿಸಬೇಕು ಎಂದು ಹೇಳಿರುವ ಜಸ್ಟಿಸ್ ಪಿ.ಸಿ.ಘೋಷ್ ಹಾಗೂ  ನಾರಿಮನ್ ಅವರಿದ್ದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಎಪ್ರಿಲ್ 7ಕ್ಕೆ ಮುಂದೂಡಿದೆ.

ಜಸ್ಟಿಸ್ ನಾರಿಮನ್ ಹಾಜರಾಗದೇ ಇದ್ದ ಕಾರಣ ಸುಪ್ರೀಂಕೋರ್ಟ್ ನಿನ್ನೆ ನಡೆಸಬೇಕಿದ್ದ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.

89 ವರ್ಷದ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ವಿರುದ್ಧ ಪಿತೂರಿ ಪ್ರಕರಣವನ್ನು ಪುನರಾರಂಭಿಸುವ ಬಗ್ಗೆ ಸುಪ್ರೀಂಕೋರ್ಟ್ ನಿರ್ಧರಿಸುವ ಸಾಧ್ಯತೆಯಿದೆ. ಅಡ್ವಾಣಿ ಸಹಿತ ಎಲ್ಲ ಬಿಜೆಪಿ ನಾಯಕರ ವಿರುದ್ಧದ ಪ್ರಕರಣವನ್ನು ಕೆಳ ನ್ಯಾಯಾಲಯ ಕೈಬಿಟ್ಟಿತ್ತು. ತಾಂತ್ರಿಕ ನೆಲೆಯಲ್ಲಿ ಬಿಜೆಪಿ ಮುಖಂಡರ ವಿರುದ್ಧ ಪ್ರಕರಣವನ್ನು ಕೈಬಿಟ್ಟಿರುವುದನ್ನು ತಾನು ಒಪ್ಪುವುದಿಲ್ಲ ಎಂದು ಕಳೆದ ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿತ್ತು.

 ಬಾಬ್ರಿ ಮಸೀದಿ-ರಾಮಮಂದಿರ ವಿವಾದ ತುಂಬಾ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯವಾಗಿದ್ದು, ನ್ಯಾಯಾಲಯದ ಹೊರಗೆ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಅಗತ್ಯವಿದ್ದರೆ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಿದ್ಧವಿದೆ ಎಂದು ಈ ವಾರಾಂತ್ಯದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಅವರು ತಮ್ಮ ತೀರ್ಪಿನಲ್ಲಿ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News