ಹಝರತ್‌ಗಂಜ್ ಠಾಣೆಗೆ ಸಿಎಂ ಆದಿತ್ಯನಾಥ್ ಹಠಾತ್ ಭೇಟಿ

Update: 2017-03-23 12:59 GMT

ಲಕ್ನೊ, ಮಾ.23: ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಂದು ಹಝರತ್‌ಗಂಜ್ ಪೊಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿ ದೈನಂದಿನ ಕಾರ್ಯವನ್ನು ವೀಕ್ಷಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ತಿಳಿಸಿದರು.

ಗೃಹ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಆದಿತ್ಯನಾಥ್, ಠಾಣೆಗಳಿಗೆ ಹಠಾತ್ ಭೇಟಿ ನೀಡಿ ಪೊಲೀಸರನ್ನು ಮತ್ತು ಅಧಿಕಾರಿಗಳನ್ನು ಅಚ್ಚರಿಯಲ್ಲಿ ಕೆಡವಿದರು.

  ರಾಜ್ಯದಲ್ಲಿ ಕಾನೂನಿನ ಅನುಷ್ಠಾನ ಯಾವ ರೀತಿ ನಡೆಯುತ್ತಿದೆ ಮತ್ತು ಪೊಲೀಸರ ನೈತಿಕತೆ ಯಾವ ಮಟ್ಟದಲ್ಲಿದೆ ಹಾಗೂ ಈ ನಿಟ್ಟಿನಲ್ಲಿ ಯಾವ ರೀತಿಯ ಪರಿಣಾಮಕಾರೀ ಕ್ರಮ ಕೈಗೊಳ್ಳಬಹುದು ಎಂದು ತಿಳಿದುಕೊಳ್ಳುವುದು ಈ ಭೇಟಿಯ ಉದ್ದೇಶವಾಗಿದೆ ಎಂದು ಬಳಿಕ ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.

 ರಾಜ್ಯ ಪೊಲೀಸ್ ಪಡೆಯ ಕ್ರೈಂ ಬ್ರಾಂಚ್ ಮತ್ತು ಸೈಬರ್ ಸೆಲ್ ವಿಭಾಗದ ಕಾರ್ಯವೈಖರಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಪೊಲೀಸ್ ಪಡೆಯ ಕಾರ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದು ತನ್ನ ಕೊನೆಯ ಪರಿಶೀಲನೆಯಲ್ಲ, ಆರಂಭವಷ್ಟೇ ಎಂದು ಎಚ್ಚರಿಕೆ ನೀಡಿದ ಅವರು, ಎಲ್ಲಾ ಹಂತದಲ್ಲೂ ಸುಧಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಮುಖ್ಯಮಂತ್ರಿಯ ಕಛೇರಿ ಇರುವ ಕಟ್ಟಡಕ್ಕೆ ಭೇಟಿ ನೀಡಿದ ಅವರು, ಅಲ್ಲೆಲ್ಲಾ ಪಾನ್ ತಿಂದು ಉಗುಳಿದ ಕಲೆಗಳನ್ನು ಕಂಡು , ಕರ್ತವ್ಯದ ಸಮಯದಲ್ಲಿ ಯಾವುದೇ ಸಿಬ್ಬಂದಿ ತಂಬಾಕು ಮತ್ತು ಪಾನ್‌ಮಸಾಲಾ ಜಗಿಯಬಾರದು ಎಂದು ರೇಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News