ರೈತರ ಸಾಲ ಮನ್ನಾ ಸಾಧ್ಯವಿಲ್ಲ: ಕೇಂದ್ರ ಸ್ಪಷ್ಟನೆ

Update: 2017-03-23 14:16 GMT

ಹೊಸದಿಲ್ಲಿ, ಮಾ.23: ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡುವುದಿಲ್ಲ ಎಂದು ತಿಳಿಸಿರುವ ವಿತ್ತ ಸಚಿವ ಅರುಣ್ ಜೇಟ್ಲೀ, ರಾಜ್ಯಗಳು ತಮ್ಮ ಸಂಪನ್ಮೂಲ ಬಳಸಿಕೊಂಡು ರೈತರ ಸಾಲಮನ್ನಾ ಮಾಡಬಹುದು ಎಂದು ಹೇಳಿದ್ದಾರೆ.

  ಒಂದು ರಾಜ್ಯಕ್ಕೆ ಸಹಾಯ ಮಾಡುವುದು, ಇತರ ರಾಜ್ಯಗಳನ್ನು ನಿರ್ಲಕ್ಷಿಸುವುದು- ಈ ರೀತಿಯ ವರ್ತನೆಯನ್ನು ಕೇಂದ್ರ ಸರಕಾರ ತೋರಲಾಗದು ಎಂದು ಸ್ಪಷ್ಟನೆ ನೀಡಿದ ಜೇಟ್ಲೀ, ಸಾಲ ಮನ್ನಾದ ವಿಷಯ ಕೆಲವು ರಾಜ್ಯಗಳಲ್ಲಿ ಚರ್ಚೆಯ ವಿಷಯವಾಗಿದೆ. ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಕಾರ್ಯನೀತಿಯನ್ನು ಕೇಂದ್ರ ಸರಕಾರ ಹೊಂದಿದೆ. ಇದರಡಿ ನಾವು ಬಡ್ಡಿ ನೆರವು ಇತ್ಯಾದಿ ಸಹಾಯ ನೀಡುತ್ತಿದ್ದು ಇದನ್ನು ಮುಂದುವರಿಸಲಿದ್ದೇವೆ.

 ಯಾವುದೇ ಒಂದು ರಾಜ್ಯ ತನ್ನದೇ ಸಂಪನ್ಮೂಲ ಬಳಸಿಕೊಂಡು ರೈತರ ಸಾಲ ಮನ್ನಾ ಮಾಡಲು ಇಚ್ಚಿಸಿದರೆ ಆ ರೀತಿ ಮಾಡಲು ಅಡ್ಡಿಯಿಲ್ಲ. ಆದರೆ ಈ ನಿಟ್ಟಿನಲ್ಲಿ ಕೇಂದ್ರದ ನಿಲುವು ಸ್ಪಷ್ಟವಾಗಿದೆ. ಒಂದು ರಾಜ್ಯಕ್ಕೆ ಪ್ರತ್ಯೇಕ ನ್ಯಾಯ ತೋರಲು ಸಾಧ್ಯವಿಲ್ಲ ಎಂದವರು ತಿಳಿಸಿದರು.

 ಉತ್ತರಪ್ರದೇಶದ ಬಿಜೆಪಿ ಸರಕಾರವು ಚುನಾವಣೆಯಲ್ಲಿ ಭರವಸೆ ನೀಡಿದಂತೆ ರಾಜ್ಯದ ರೈತರ ಸಾಲ ಮನ್ನಾ ಮಾಡಲಿದೆ ಎಂದು ಕೃಷಿ ಸಚಿವ ರಾಧಾಮೋಹನ್ ಸಿಂಗ್ ತಿಳಿಸಿದರು. ಆದರೆ ಕೇವಲ ಉತ್ತರಪ್ರದೇಶದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ 2006ರಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News