ಶಿವಸೇನೆ ಸಂಸದನಿಂದ ಏರ್‌ಇಂಡಿಯಾ ಉದ್ಯೋಗಿಗೆ ಚಪ್ಪಲಿಯೇಟು

Update: 2017-03-23 16:05 GMT

ಹೊಸದಿಲ್ಲಿ,ಮಾ.23: ತನಗೆ ‘ಬ್ಯುಸಿನೆಸ್ ಕ್ಲಾಸ್’ ಸೀಟ್‌ನಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದಕ್ಕಾಗಿ ಆಕ್ರೋಶಗೊಂಡಿದ್ದ ಶಿವಸೇನೆಯ ಸಂಸದರೊಬ್ಬರು ಏರ್‌ಇಂಡಿಯಾದ ಉದ್ಯೋಗಿಗೆ ತನ್ನ ಚಪ್ಪಲಿಯಿಂದ ಹಿಗ್ಗಾಮಗ್ಗಾ ಥಳಿಸಿದ್ದಾರೆ. ತನ್ನ ಈ ಕೃತ್ಯಕ್ಕೆ ಕಿಂಚಿತ್ ಪಶ್ಚಾತ್ತಾಪ ಪಡದ ಸಂಸದ ರವೀಂದ್ರ ಗಾಯಕ್‌ವಾಡ್ ಆನಂತರ, ‘‘ಏರ್‌ಇಂಡಿಯಾದ ಉದ್ಯೋಗಿ ಉದ್ಧಟದಿಂದ ವರ್ತಿಸಿದ್ದ. ಆತನಿಗೆ ನನ್ನ ಚಪ್ಪಲಿಯಿಂದ 25 ಸಲ ಥಳಿಸಿದೆ’’ ಎಂದು ಟಿವಿ ವಾಹಿನಿಯೊಂದರ ಮುಂದೆ ಕೊಚ್ಚಿಕೊಂಡಿದ್ದಾರೆ.

   ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಹೊಂದಿದ್ದರೂ, ತಾನು ಹಲವು ಸಲ ಇಕಾನಮಿ ದರ್ಜೆಯ ಸೀಟಿನಲ್ಲಿಯೇ ಪ್ರಯಾಣಿಸಬೇಕಾಗಿ ಬಂದಿದ್ದರಿಂದ ಗಾಯಕ್‌ವಾಡ್ ಕಳೆದ ಕೆಲವು ಸಮಯದಿಂದ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಅವರು ಇಂಡಿಯನ್ ಏರ್‌ಲೈನ್ಸ್‌ಗೆ ದೂರು ನೀಡಿದ್ದರೆಂದು ಸಂಸದರ ನಿಕಟವರ್ತಿಗಳು ತಿಳಿಸಿದ್ದಾರೆ.

 ಗಾಯಕ್‌ವಾಡ್ ಅವರು ಗುರುವಾರ ಪುಣೆಯಿಂದ, ಏರ್‌ಇಂಡಿಯಾ ವಿಮಾನದಲ್ಲಿ ದಿಲ್ಲಿಗೆ ಪ್ರಯಾಣಿಸಿದ್ದರು.ಆದರೆ ಈ ಸಲವೂ ಇಕಾನಮಿ ದರ್ಜೆಯ ಸೀಟುಗಳ ಲಭ್ಯವಿ ೆಯೆಂಬ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಸಮಜಾಯಿಷಿಯನ್ನು ಅವರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.

     ಕೆಂಡಾಮಂಡಲವಾಗಿದ್ದ ಗಾಯಕ್‌ವಾಡ್ ದಿಲ್ಲಿಯಲ್ಲಿ ವಿಮಾನ ಇಳಿದ ನಂತರವೂ, ಸುಮಾರು ಒಂದು ತಾಸಿನವರೆಗೂ ಆಸನವನ್ನು ಬಿಟ್ಟು ಏಳಲಿಲ್ಲ. ಆಗ ಇಂಡಿಯನ್ ಏರ್‌ಲೈನ್ಸ್ ಉದ್ಯೋಗಿಯೊಬ್ಬರು ಬಂದು ಅವರನ್ನು ವಿಮಾನದಿಂದ ಹೊರತೆರಳುವಂತೆ ಒತ್ತಾಯಿಸಿದರು. ಆಗ ಗಾಯಕ್‌ವಾಡ್ ಆತನೊಂದಿಗೆ ವಾಗ್ವಾದಕ್ಕಿಳಿದಾಗ, ಉದ್ಯೋಗಿ ‘ಸುಮ್ಮನಿರಿ. ರಕ್ತದೊತ್ತಡ ಹೆಚ್ಚಿಸಬೇಡಿ’ ಎಂದು ವ್ಯಂಗ್ಯವಾಡಿದನೆನ್ನಲಾಗಿದೆ.

   ಇದರಿಂದ ಸಿಡಿಮಿಡಿಗೊಂಡ ಗಾಯಕ್‌ವಾಡ್, ‘ನಾನು ಎಂಪಿ, ಏರುಧ್ವನಿಯಲ್ಲಿ ಮಾತನಾಡಬೇಡ’ ಎಂದು ಹೇಳಿದನೆನ್ನಲಾಗಿದೆ. ಆಗ ಸಿಬ್ಬಂದಿ, ‘‘ ನೀವು ಎಂಪಿಯಾದರೇನು? ನಾನು ಮೋದಿಯೊಂದಿಗೆ ಮಾತನಾಡುವೆ’’ ಎಂದು ಉಡಾಫೆಯಿಂದ ಹೇಳಿದ್ದನೆನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಗಾಯಕ್‌ವಾಡ್ ತಾನು ಧರಿಸಿದ್ದ ಚಪ್ಪಲಿಯಿಂದ ಏರ್‌ಇಂಡಿಯಾ ಉದ್ಯೋಗಿಗೆ ಚಪ್ಪಲಿಯಲ್ಲಿ ಹಲವು ಸಲ ಥಳಿಸಿದ್ದಾರೆ.ತಾನು ಇಂಡಿಯನ್ ಏರ್‌ಲೈನ್ಸ್ ಉದ್ಯೋಗಿಯನ್ನು ಥಳಿಸಿರುವುದಾಗಿ ಸ್ವತಃ ಗಾಯಕವಾಡ್ ಎನ್‌ಡಿಟಿವಿ ಸುದ್ದಿವಾಹಿನಿಯೊಂದಿಗೆ ಹೇಳಿಕೊಂಡಿದ್ದಾರೆ.

 ‘‘ನಾನು ಬಿಜೆಪಿಗನಲ್ಲವೆಂಬ ಕಾರಣಕ್ಕಾಗಿ ಬೈಗುಳಗಳನ್ನು ಕೇಳಲು ತಯಾರಿಲ್ಲ’’ ಎಂದವರು ಹೇಳಿದ್ದಾರೆ. ಘಟನೆಯ ಬಗ್ಗೆ ಲೋಕಸಭಾ ಸ್ಪೀಕರ್ ಹಾಗೂ ನಾಗರಿಕ ವಾಯುಯಾನ ಸಚಿವ ಅಶೋಕ್ ಗಜಪತಿ ರಾಜು ಅವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.ಶಿವಸೇನೆ ಸಂಸದನಿಂದ ಹಲ್ಲೆಗೊಳಗಾದ ಏರ್‌ಇಂಡಿಯಾದ ಉದ್ಯೋಗಿಯು, ತನ್ನನ್ನು ಸಂಸದ ಗಾಯಕ್‌ವಾಡ್ ಅವರು ಇಡೀ ಸಿಬ್ಬಂದಿಯ ಮುಂದೆಯೇ ಅಪಮಾನ ಗೊಳಿಸಿದ್ದಾರೆ ಹಾಗೂ ತನ್ನ ಕನ್ನಡಕವನ್ನು ಒಡೆದುಹಾಕಿದ್ದಾರೆಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News