ಅಸ್ವಸ್ಥ ತಾಯಿಯ ಐಫೋನ್ ಅನ್ ಲಾಕ್ ಮಾಡಿ ಎಮರ್ಜನ್ಸಿ ಸೇವೆಗೆ ಕರೆ ಮಾಡಿದ 4ರ ಪೋರ!

Update: 2017-03-24 10:25 GMT

ಲಂಡನ್, ಮಾ.24: ಈಗಿನ ಮಕ್ಕಳು ಎಷ್ಟು ಬುದ್ಧಿವಂತರು ಹಾಗೂ ಚತುರರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈಗಿನ ಅತ್ಯಾಧುನಿಕ ಸಾಧನಗಳಾದ ಮೊಬೈಲ್ ಫೋನ್, ಕಂಪ್ಯೂಟರುಗಳನ್ನು ಉಪಯೋಗಿಸುವಲ್ಲಿ ಹಿರಿಯರಿಗಿಂತಲೂ ಮಕ್ಕಳೇ ಹೆಚ್ಚು ನಿಪುಣರು ಎಂದು ಹಲವರು ಹೇಳುವುದುಂಟು. ಮಕ್ಕಳ ಈ ಜ್ಞಾನ ತುರ್ತು ಸಂದರ್ಭಗಳಲ್ಲೂ ಹೇಗೆ ನೆರವಾಗಬಹುದೆನ್ನುವುದಕ್ಕೆ ಇಂಗ್ಲೆಂಡಿನಲ್ಲಿ ನಡೆದ ಘಟನೆ ಒಂದು ಜ್ವಲಂತ ಉದಾಹರಣೆಯಾಗಿದೆ.

ಮಾರ್ಚ್ 7ರಂದು ರೋಮನ್ ಎಂಬ ನಾಲ್ಕು ವರ್ಷದ ಬಾಲಕ ತನ್ನ ಅವಳಿ ಸಹೋದರ ಹಾಗೂ ಕಿರಿಯ ಸಹೋದರನೊಂದಿಗೆ ಮನೆಯಲ್ಲಿದ್ದಾಗ ಅವರ ತಾಯಿ ಒಮ್ಮೆಗೇ ಕುಸಿದು ಬಿದ್ದಿದ್ದಳು. ಆಕೆ ಮೇಲೇಳದೇ ಇದ್ದಾಗ ರೋಮನ್ ಸಮಯಪ್ರಜ್ಞೆಯಿಂದ ಆಕೆಯ ಬೆರಳನ್ನು ಆಕೆಯ ಐಫೋನಿಗೆ ಹಿಡಿದು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮೂಲಕ ಅದನ್ನು ಅನ್ ಲಾಕ್ ಮಾಡಿ, ಇಂಗ್ಲೆಂಡಿನ ಎಮರ್ಜನ್ಸಿ ಸಂಖ್ಯೆ 999ಗೆ 'ಸಿರಿ' ಆ್ಯಪ್ ಉಪಯೋಗಿಸಿ ಕರೆ ಮಾಡಿದ್ದ. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿಗೆ ತನ್ನ ಅಮ್ಮ ಸತ್ತಿದ್ದಾಳೆಂದು ಹೇಳಿದ. ಪುಟ್ಟ ಬಾಲಕನೊಬ್ಬ ಮಾತನಾಡುತ್ತಿದ್ದಾನೆಂದು ಅರಿತ ಅತ್ತ ಕಡೆಯ ವ್ಯಕ್ತಿ ಹಾಗೆಂದರೇನು ಎಂದು ಕೇಳಿದಾಗ ‘‘ಆಕೆ ತನ್ನ ಕಣ್ಣುಗಳನ್ನು ಮುಚ್ಚಿದ್ದಾಳೆ, ಉಸಿರಾಟ ನಡೆಸುತ್ತಿಲ್ಲ’’ ಎಂದು ಬಿಟ್ಟ.

ಕೊನೆಗೆ ತನ್ನ ವಿಳಾಸವನ್ನು ಆ ಬಾಲಕ ತಿಳಿಸಿದ ಕಾರಣ, ಪೊಲೀಸರು ಹಾಗೂ ತುರ್ತು ಸೇವಾ ವಿಭಾಗದವರು ಮನೆಗೆ 13 ನಿಮಿಷಗಳಲ್ಲೇ ಆಗಮಿಸಿ ರೋಮನ್ ತಾಯಿಗೆ ಪ್ರಥಮ ಚಿಕಿತ್ಸೆ ನೀಡಿ ಆಕೆಗೆ ಸ್ಮತಿ ಮರಳಿದ ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು.

ಹೆತ್ತವರು ಸಣ್ಣ ವಯಸ್ಸಿನಲ್ಲೇ ತಮ್ಮ ಮಕ್ಕಳ ಕೈಗೆ ಮೊಬೈಲ್ ಫೋನ್ ನೀಡುತ್ತಿರುವುದು ನಿಜವಾದರೂ ಅವರಿಗೆ ತಮ್ಮ ವಿಳಾಸ ಹಾಗೂ ಫೋನ್ ನಂಬರ್ ಬಗ್ಗೆ ಕೂಡ ಮಾಹಿತಿ ನೀಡಿ ತುರ್ತು ಸಂದರ್ಭಗಳಲ್ಲಿ ಯಾವ ಸಂಖ್ಯೆಗೆ ಕರೆ ಮಾಡಬೇಕು ಎಂಬುದನ್ನೂ ತಿಳಿಸಬೇಕು ಎಂಬುದು ಈ ಘಟನೆಯಿಂದ ಎಲ್ಲರೂ ಅರಿತಿರಬೇಕಾದ ಪಾಠವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News