×
Ad

ನಾನು ಅಧ್ಯಕ್ಷ, ನೀವಲ್ಲ! ; ‘ಟೈಮ್’ ಪತ್ರಕರ್ತನಿಗೆ ಟ್ರಂಪ್ ತಿರುಗೇಟು

Update: 2017-03-24 19:11 IST

ವಾಶಿಂಗ್ಟನ್, ಮಾ. 24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಟೈಮ್’ ಮ್ಯಾಗಝಿನ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ತನ್ನ ರಾಜಕೀಯ ಬದುಕಿನಲ್ಲಿ ತೆಗೆದುಕೊಂಡ ಹೆಚ್ಚಿನ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ‘‘ನನಗೆ ಸಹಜವಾಗಿ ಅನಿಸಿದ್ದನ್ನು ಮಾಡುವ ವ್ಯಕ್ತಿ ನಾನು, ಆದರೆ ನನ್ನ ಅನಿಸಿಕೆಗಳು ಸರಿಯಾಗಿವೆ... ನನ್ನ ನಿರ್ವಹಣೆ ಅಷ್ಟು ಕೆಟ್ಟದಾಗಿರಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ನಾನು ಅಧ್ಯಕ್ಷ, ನೀವಲ್ಲ’’ ಎಂದು ಗುರುವಾರ ‘ಟೈಮ್ಸ್’ ವಾಶಿಂಗ್ಟನ್ ಬ್ಯೂರೋ ಮುಖ್ಯಸ್ಥ ಮೈಕಲ್ ಶೆರರ್ ಅವರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ಟ್ರಂಪ್‌ರ ಮಿಥ್ಯೆಗಳಿಗೆ ಸಂಬಂಧಿಸಿ ಸಂದರ್ಶನದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಟ್ರಂಪ್ ತನ್ನ ವಿಧಾನಗಳ ಬಗ್ಗೆ ಸರಳ ಹಾಗೂ ನೂತನ ಸಮರ್ಥನೆಗಳನ್ನು ನೀಡಿದರು ಎಂದು ಸಿಎನ್‌ಎನ್ ವರದಿ ಮಾಡಿದೆ.

‘‘ನಾನು ನಿಮಗೆ ಏನು ಹೇಳಲಿ? ನಾನು ಸರಿಯಾಗಿದ್ದೇನೆ... ಬದುಕು ಹೇಗೆ ಸಾಗುತ್ತದೆ ಎಂದು ತಿಳಿದಿರುವ ವ್ಯಕ್ತಿ ನಾನು’’ ಎಂದು ಒಂದು ಹಂತದಲ್ಲಿ ಅವರು ತನ್ನ ಟೀಕಾಕಾರರಿಗೆ ತಿರುಗೇಟು ನೀಡಿದರು.

‘ಈಸ್ ಟ್ರುತ್ ಡೆಡ್?’ (ಸತ್ಯ ಸತ್ತಿತಾ?)ಎಂಬ ತಲೆಬರಹದ ಮುಖಪುಟ ಲೇಖನಕ್ಕಾಗಿ ಈ ಸಂದರ್ಶನವನ್ನು ನಡೆಸಲಾಗಿದೆ. ಟ್ರಂಪ್ ಮಾಡಿರುವ ಫೋನ್ ಕದ್ದಾಲಿಕೆ ಆರೋಪದಿಂದ ಹಿಡಿದು ಚುನಾವಣಾ ಪ್ರಚಾರದ ವೇಳೆ ಸೆನೆಟರ್ ಟೆಡ್ ಕ್ರೂಝ್‌ರ ತಂದೆ ಮತ್ತು ಜಾನ್ ಎಫ್. ಕೆನಡಿ ಹತ್ಯೆ ನಡುವೆ ಸುಳ್ಳು ಸಂಬಂಧ ಕಲ್ಪಿಸಿದ ವಿಷಯಗಳವರೆಗೆ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.

2016ರ ಚುನಾವಣೆಯ ವೇಳೆ ಟ್ರಂಪ್ ಟವರ್‌ನಲ್ಲಿನ ತನ್ನ ಫೋನ್‌ಗಳನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕದ್ದಾಲಿಸಿದ್ದರೆ ಎಂಬ ಆರೋಪಗಳಿಗೆ ಸಂಬಂಧಿಸಿ ಟ್ರಂಪ್‌ರಲ್ಲಿ ಯಾವುದೇ ಪಶ್ಚಾತ್ತಾಪ ಇದ್ದಂತೆ ಕಾಣಲಿಲ್ಲ. ಈ ಆರೋಪವನ್ನು ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮಿ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News