ಆ್ಯಪಲ್ ಕಂಪ್ಯೂಟರ್‌ಗಳಿಗೆ ಕನ್ನ ಹಾಕಿ ನಿರಂತರ ಮಾಹಿತಿ ಕದಿಯುವ ಸಿಐಎ
ವಾಶಿಂಗ್ಟನ್, ಮಾ. 24: ಆ್ಯಪಲ್ ಕಂಪೆನಿಯ ಮ್ಯಾಕ್ ಕಂಪ್ಯೂಟರ್‌ಗೆ ಯಾವಾಗ ಬೇಕಾದರೂ ಕನ್ನ ಹಾಕುವ ಸಾಮರ್ಥ್ಯವನ್ನು ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ (ಸಿಐಎ) ಹೊಂದಿದೆ ಎಂಬುದಾಗಿ ‘ವಿಕಿಲೀಕ್ಸ್’ ಗುರುವಾರ ಬಹಿರಂಗಡಿಸಿದ ದಾಖಲೆಗಳು ಹೇಳುತ್ತವೆ. ಮ್ಯಾಕ್ ಆಪರೇಟಿಂಗ್ ಸಿಸ್ಟಮನ್ನು ರಿಇನ್‌ಸ್ಟಾಲ್ ಮಾಡಿದರೂ ಅದರಲ್ಲಿರುವ ಗುಪ್ತ ಸಿಐಎ ಸಾಫ್ಟ್‌ವೇರ್ ಅಳಿಸಿಹೋಗುವುದಿಲ್ಲ ಎನ್ನಲಾಗಿದೆ.
ಆ್ಯಪಲ್‌ನ ನೂತನ ಮತ್ತು ಬಳಸದ ಐಫೋನ್‌ಗಳ ಒಳಗೂ ತನ್ನ ಕಳ್ಳ ಸಾಫ್ಟ್‌ವೇರನ್ನು ಸೇರಿಸಲು 2008ರಿಂದಲೇ ಸಿಐಎಗೆ ಸಾಧ್ಯವಾಗಿದೆ ಎಂದು ವಿಕಿಲೀಕ್ಸ್ ಹೇಳಿದೆ.
ಆ್ಯಪಲ್‌ನ ಪೂರೈಕೆ ಮತ್ತು ವಿತರಣೆ ಜಾಲವನ್ನು ಪ್ರವೇಶಿಸಿ ಅದು ತನ್ನ ಕಾರ್ಯವನ್ನು ಸಾಧಿಸುತ್ತದೆ ಎಂದಿದೆ.ವಿಕಿಲೀಕ್ಸ್ ಮಾರ್ಚ್ 9ರಂದು, ಸಿಐಎ ಕನ್ನಹಾಕಲು ಬಳಸುವ ಕೋಡ್‌ಗಳನ್ನೊಳಗೊಂಡ ಸಾವಿರಾರು ಪುಟಗಳ ದಾಖಲೆಗಳನ್ನು ಬಿಡುಗಡೆಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.
ಆ ದಾಖಲೆಗಳು ನೈಜ ಎಂಬುದಾಗಿ ಸಾಮಾನ್ಯವಾಗಿ ಭಾವಿಸಲಾಗಿದೆ. ಆದಾಗ್ಯೂ, ಸಿಐಎ ಅದನ್ನು ಒಪ್ಪಿಕೊಂಡಿಲ್ಲ.ದಾಖಲೆಗಳು ಬಹಿರಂಗಗೊಂಡ ಬೆನ್ನಲ್ಲೇ, ಇವುಗಳು ಸಿಐಎಯಿಂದ ಹೇಗೆ ಸೋರಿಕೆಯಾದವು ಹಾಗೂ ವಿಕಿಲೀಕ್ಸ್‌ಗೆ ಹೇಗೆ ಹೋದವು ಎಂಬ ಬಗ್ಗೆ ತನಿಖೆಗೆ ಆದೇಶ ನೀಡಲಾಗಿತ್ತು.
ಸಿಐಎ ಖಾಸಗಿ ಉಪಗುತ್ತಿಗೆದಾರರನ್ನು ಬಳಸುತ್ತಿದ್ದು, ಅವರ ಮೂಲಕ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆಯಿದೆ ಎಂಬ ನಿರ್ಧಾರಕ್ಕೆ ಕೆಲವರು ಬಂದಿದ್ದರು.
ಈಗ, ಜನರ ಮೇಲೆ ಬೇಹುಗಾರಿಕೆ ನಡೆಸಲು ಸಿಐಎ ಆ್ಯಪಲ್‌ನ ಜನಪ್ರಿಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ಹೇಗೆ ಬಳಸುತ್ತಿದೆ ಎನ್ನುವುದರ ಮೇಲೆ ವಿಕಿಲೀಕ್ಸ್ ಬೆಳಕು ಚೆಲ್ಲಿದೆ.
ಸಿಐಎ 2012ರಲ್ಲಿ ‘ಸೋನಿಕ್ ಸ್ಕ್ರೂಡ್ರೈವರ್’ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಅದು ಆ್ಯಪಲ್ ಕಂಪ್ಯೂಟರ್‌ನ ಪಾಸ್‌ವರ್ಡ್ ರಕ್ಷಿತ ಬೂಟ್ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ.
ಈ ಮೂಲಕ, ಪತ್ತೆಹಚ್ಚಲಾಗದ ಕಳ್ಳ ಸಾಫ್ಟ್‌ವೇರೊಂದನ್ನು ಕಂಪ್ಯೂಟರ್‌ನ ಮಹತ್ವದ ಸಾಫ್ಟ್‌ವೇರ್‌ನ ಒಳಕ್ಕೆ ತಳ್ಳಿಬಿಡಲಾಗುತ್ತದೆ. ಕಂಪ್ಯೂಟರನ್ನು ಫಾರ್ಮಾಟ್ ಮಾಡಿದರೂ ಅದು ಅಳಿಸಿಹೋಗುವುದಿಲ್ಲ.