ಅಯೋಧ್ಯೆ ವಿವಾದ : ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಎಬಿಎಪಿ ಒಲವು
ಹರಿದ್ವಾರ, ಮಾ.24: ಸುಪ್ರೀಂಕೋರ್ಟ್ ಸಲಹೆಯಂತೆ ಅಯೋಧ್ಯ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸುವ ಕುರಿತು ಚರ್ಚಿಸಲು ಶೀಘ್ರವೇ ಸಭೆಯೊಂದನ್ನು ನಡೆಸಲಾಗುವುದು ಎಂದು ಅಖಿಲ ಭಾರತೀಯ ಆಖಾಡ ಪರಿಷದ್(ಎಬಿಎಪಿ) ತಿಳಿಸಿದೆ.
ಈ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಸಲಹೆ ಸ್ವಾಗತಾರ್ಹವಾಗಿದ್ದು ಈ ಸಲಹೆ ಯ ಸಂಭವನೀಯತೆಯ ಕುರಿತು ಚರ್ಚಿಸಲು ಸಭೆ ನಡೆಸಲಾಗುವುದು ಎಂದು ಎಬಿಎಪಿ ವಕ್ತಾರ ಮೋಹನ್‌ದಾಸ್ ತಿಳಿಸಿದ್ದಾರೆ.
ಈ ಜಾಗದಲ್ಲಿ ರಾಮಮಂದಿರ ನಿರ್ಮಿಸುವ ಕುರಿತು ಯೋಜನೆ ರೂಪಿಸುವ ಸಲುವಾಗಿ ಮುಸ್ಲಿಂ ಧಾರ್ಮಿಕ ಮುಖಂಡರೊಡನೆ ಮಾತುಕತೆ ನಡೆಸುವುದಾಗಿ ದಾಸ್ ತಿಳಿಸಿದರು. ಅಯೋಧ್ಯೆಯ ವಿವಾದ ಪರಿಹರಿಸುವ ಉದ್ದೇಶದಿಂದ ಈ ಹಿಂದೆ ನಡೆದಿದ್ದ ಮಾತುಕತೆಗಳು ವಿಫಲವಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದಾಸ್, ಸುಪ್ರೀಂಕೋರ್ಟ್‌ನ ಸಲಹೆಯನ್ನು ಸ್ವಾಗತಿಸಿ ಮತ್ತೊಂದು ಪ್ರಯತ್ನ ನಡೆಸಬೇಕು ಎಂದುತ್ತರಿಸಿದರು.
ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಬೇಕೆಂದು ಸುಪ್ರೀಂಕೋರ್ಟ್ ಮಂಗಳವಾರ ಸಲಹೆ ನೀಡಿತ್ತು.