ಮಲ್ಯ ಗಡಿಪಾರು ಮನವಿಗೆ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಪ್ರಮಾಣ

Update: 2017-03-24 14:31 GMT

ಲಂಡನ್, ಮಾ. 24: ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ಮಾಜಿ ಕೈಗಾರಿಕೋದ್ಯಮಿ ವಿಜಯ ಮಲ್ಯರನ್ನು ಗಡಿಪಾರು ಮಾಡಬೇಕೆಂದು ಕೋರುವ ಭಾರತದ ಕೋರಿಕೆಯನ್ನು ವಿದೇಶಾಂಗ ಕಾರ್ಯದರ್ಶಿ ಪ್ರಮಾಣೀಕರಿಸಿದ್ದಾರೆ ಎಂದು ಬ್ರಿಟನ್ ಭಾರತಕ್ಕೆ ತಿಳಿಸಿದೆ.

‘‘ಮಲ್ಯರನ್ನು ಗಡಿಪಾರು ಮಾಡಬೇಕೆಂದು ಕೋರಿ ಭಾರತ ಸಲ್ಲಿಸಿರುವ ಮನವಿಯನ್ನು ವಿದೇಶಾಂಗ ಕಾರ್ಯದರ್ಶಿ ಪ್ರಮಾಣೀಕರಿಸಿದ್ದಾರೆ ಹಾಗೂ ವಾರಂಟ್ ಹೊರಡಿಸುವ ಬಗ್ಗೆ ಪರಿಶೀಲಿಸುವುದಕ್ಕಾಗಿ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂಬುದನ್ನು ಬ್ರಿಟನ್‌ನ ಗೃಹ ಸಚಿವಾಲಯ ಫೆಬ್ರವರಿ 21ರಂದು ಭಾರತಕ್ಕೆ ಮಾಹಿತಿ ನೀಡಿದೆ’’ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಗ್‌ಲಾಯ್ ತಿಳಿಸಿದರು.

ಭಾರತದಲ್ಲಿ 9,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬ್ಯಾಂಕ್ ಸಾಲವನ್ನು ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಮಲ್ಯರ ಗಡಿಪಾರಿನ ನಿಟ್ಟಿನಲ್ಲಿ ಮುಂದಿಟ್ಟ ಒಂದು ಹೆಜ್ಜೆ ಇದಾಗಿದೆ.

ಮಲ್ಯರಿಗೆ ಸಂಬಂಧಿಸಿ, ಭಾರತ ಮತ್ತು ಬ್ರಿಟನ್ ನಡುವಿನ ಗಡಿಪಾರು ಒಪ್ಪಂದಕ್ಕೆ ಅನುಸಾರವಾಗಿ ಔಪಚಾರಿಕ ಗಡಿಪಾರು ಮನವಿಯೊಂದನ್ನು ಬ್ರಿಟಿಶ್ ಹೈಕಮಿಶನ್‌ಗೆ ಫೆಬ್ರವರಿ 8ರಂದು ಹಸ್ತಾಂತರಿಸಲಾಗಿತ್ತು ಎಂದು ಬಗ್‌ಲಾಯ್ ತಿಳಿಸಿದರು.

ಈ ವರ್ಷದ ಜನವರಿಯಲ್ಲಿ ಸಿಬಿಐ ನ್ಯಾಯಾಲಯವೊಂದು ಐಡಿಬಿಐ ಬ್ಯಾಂಕ್‌ನ 720 ಕೋಟಿ ರೂಪಾಯಿ ಸಾಲ ವಂಚನೆಗೆ ಸಂಬಂಧಿಸಿ ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತ್ತು.

ಅವರು ಕಳೆದ ವರ್ಷದ ಮಾರ್ಚ್ 2ರಂದು ಭಾರತದಿಂದ ಬ್ರಿಟನ್‌ಗೆ ಪಲಾಯನಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News