ಕೋಲ್‌ಮಾಲ್: ಇನ್ನೂ ಐವರ ವಿರುದ್ಧ ಚಾರ್ಜ್‌ಶೀಟ್

Update: 2017-03-24 16:25 GMT

  ಹೊಸದಿಲ್ಲಿ,ಮಾ.24: ಮಾಜಿ ಕಾಂಗ್ರೆಸ್ ಸಂಸದ ಹಾಗೂ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಮತ್ತಿತರರು ಆರೋಪಿಗಳಾಗಿರುವ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಸಿಬಿಐ ಶುಕ್ರವಾರ ಇನ್ನೂ ಇತರ ಐದು ಮಂದಿಯ ವಿರುದ್ಧ ದೋಷಾರೋಪಪಟ್ಟಿಯನ್ನು ಸಲ್ಲಿಸಿದೆ.

    ಜಿಂದಾಲ್ ಸ್ಟೀಲ್ಸ್‌ನ ಸಲಹೆಗಾರ ಆನಂದ್ ಗೋಯೆಲ್, ಗುರ್ಗಾಂವ್ ಇನ್ಫ್ರಾದ ಉಪಾಧ್ಯಕ್ಷ ಸಿದ್ಧಾರ್ಥ್ ಮಲ್ಹೋತ್ರಾ, ಮುಂಬೈನಿಂದ ಕಾರ್ಯಾಚರಿಸುವ ಕೆಇ ಇಂಟರ್‌ನ್ಯಾಶನಲ್‌ನ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಅಗರ್‌ವಾಲ್, ನಿಹಾರ್ ಸ್ಟಾಕ್ಸ್ ಲಿಮಿಟೆಡ್‌ನ ನಿರ್ದೇಶಕ ಬಿ.ಎಸ್.ಎನ್. ಸೂರ್ಯನಾರಾಯಣ್ ಹಾಗೂ ಮುಂಬೈನ ಎಸ್ಸಾರ್ ಪವರ್ ಲಿಮಿಟೆಡ್‌ನ ಕಾರ್ಯನಿರ್ವಹಣಾಧಿಕಾರಿ ಉಪಾಧ್ಯಕ್ಷ ಸುಶೀಲ್ ಕುಮಾರ್ ಮಾರೂ ವಿರುದ್ಧ ಪೂರಕ ದೋಷಾರೋಪ ಪಟ್ಟಿಯನ್ನು ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರಿಗೆ ಸಿಬಿಐ ಸಲ್ಲಿಸಿದೆ.

ಜಿಂದಾಲ್ ಸ್ಟೀಲ್ ಹಾಗೂ ಗಗನ್ ಸ್ಪಾಂಜ್ ಸಂಸ್ಥೆಗೆ ಜಾರ್ಖಂಡ್‌ನ ಅಮರ್‌ಕೊಂಡ ಮುರ್ಗದಾಂಗಲ್ ಕಲ್ಲಿದ್ದಲು ನಿಕ್ಷೇಪದ ವಿತರಣೆ ಹಗರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

 ಈ ಬಹುಕೋಟಿ ಹಗರಣದಲ್ಲಿ ನವೀನ್ ಜಿಂದಾಲ್ ಜೊತೆಗ ಮಾಜಿ ಕಲ್ಲಿದ್ದಲು ಸಚಿವ ದಾಸರಿ ನಾರಾಯಣ ರಾವ್, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಕೂಡಾ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಸಿಬಿಐ 2015ರಂದು ಚಾರ್ಜ್‌ಶೀಟ್ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News