×
Ad

ಅಜ್ಮೀರ್ ಸ್ಫೋಟ ಆರೋಪಿಯನ್ನು ಭೇಟಿಯಾಗಿದ್ದ ಆದಿತ್ಯನಾಥ್

Update: 2017-03-24 23:54 IST

ಹೊಸದಿಲ್ಲಿ, ಮಾ.24: ಮೂರು ಮಂದಿಯನ್ನು ಬಲಿ ಪಡೆದು 15 ಮಂದಿ ಗಾಯಗೊಳ್ಳಲು ಕಾರಣ ವಾಗಿದ್ದ ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸುನೀಲ್ ಜೋಶಿ ಎಂಬಾತನನ್ನು ಘಟನೆ ನಡೆಯುವ ಒಂದು ವರ್ಷದ ಮೊದಲು ಅಂದಿನ ಬಿಜೆಪಿ ಸಂಸದರಾಗಿದ್ದ ಹಾಗೂ ಹಾಲಿ ಉತ್ತರ ಪ್ರದೇಶ ಸಿಎಂ ಆಗಿರುವ ಯೋಗಿ ಆದಿತ್ಯನಾಥ್ ಭೇಟಿ ಮಾಡಿದ್ದರು ಎಂದು ಜೋಶಿಯವರ ಮಾಜಿ ಸಹಚರ ಹೇಳಿಕೆ ನೀಡಿದ್ದಾರೆ.

ರಾಜಸ್ಥಾನ ಎಟಿಎಸ್ ಹಾಗೂ ಎನ್‌ಐಎ ತನಿಖೆಯಿಂದ ತಿಳಿದುಬಂದಂತೆ ಈ ಭೇಟಿ 2006ರ ಮಾರ್ಚ್-ಎಪ್ರಿಲ್‌ನಲ್ಲಿ ಗೋರಖ್‌ಪುರದಲ್ಲಿರುವ ಆದಿತ್ಯನಾಥ್ ನಿವಾಸದಲ್ಲಿ ನಡೆದಿತ್ತು. ಜೋಶಿಯ ದಿನಚರಿ ಪುಸ್ತಕದಲ್ಲಿ ಆದಿತ್ಯನಾಥ್ ಅವರ ದೂರವಾಣಿ ಸಂಖ್ಯೆಯೂ ಪತ್ತೆಯಾಗಿತ್ತು ಎಂದು ಎನ್‌ಐಎ ಹೇಳಿಕೆ ನೀಡಿತ್ತು. ಜೋಶಿ 2007ರ ಡಿಸೆಂಬರ್‌ನಲ್ಲಿ ಹತ್ಯೆಯಾದ ಬಳಿಕ ಅವರ ನಿವಾಸದಿಂದ ವಶಪಡಿಸಿಕೊಂಡ ದಿನಚರಿಯಲ್ಲಿ ಈ ಸಂಖ್ಯೆ ಪತ್ತೆಯಾಗಿತ್ತು.

ಸ್ವಾಮಿ ಅಸೀಮಾನಂದ ಅವರ ಅನುಯಾಯಿ ಮೋಹನ್‌ಲಾಲ್ ರತೇಶ್ವರ್ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಲು ಸಿಎಂ ಕಚೇರಿಯನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಿಲ್ಲ. ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ರತೇಶ್ವರ್ ಅವರನ್ನು ಈ ತಿಂಗಳು ಎನ್‌ಐಎ ನ್ಯಾಯಾಲಯ ಆರೋಪಮುಕ್ತಗೊಳಿಸಿತ್ತು. ಪ್ರಕರಣದಲ್ಲಿ, ಆರೆಸ್ಸೆಸ್ ಪ್ರಚಾರಕ್ ಆಗಿದ್ದ ಜೋಶಿ, ಭವೇಶ್ ಪಟೇಲ್ ಹಾಗೂ ದೇವೇಂದ್ರ ಗುಪ್ತ ಅವರನ್ನಷ್ಟೇ ತಪ್ಪಿತಸ್ಥ ಎಂದು ನಿರ್ಧರಿಸಿತ್ತು. ಜೋಶಿ ಈಗಾಗಲೇ ಮೃತಪಟ್ಟಿದ್ದು, ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News