ಈ ಪುಟ್ಟ ರಾಷ್ಟ್ರದ ಸರಕಾರದಲ್ಲಿ 110 ಸಚಿವರು !
ಅಕ್ರ, ಮಾ. 25: ಎರಡೂವರೆ ಕೋಟಿ ಜನಸಂಖ್ಯೆಯಿರುವ ಘಾನದಲ್ಲಿ ಅಧ್ಯಕ್ಷ ನಾನಾ ಅಕುಫೊ ಅಡ್ಡೊ, ಆನೆಯ ಗಾತ್ರದ ಸಚಿವ ಸಂಪುಟ ರಚಿಸಿದ್ದು, ಟೀಕೆಗಳ ಸುರಿಮಳೆಗೆ ತುತ್ತಾಗಿದ್ದಾರೆ. ಘಾನ, ಆಫ್ರಿಕದ ಪಶ್ಚಿಮ ಕರಾವಳಿಯ ಒಂದು ಸಣ್ಣರಾಷ್ಟ್ರವಾಗಿದೆ, ಇಷ್ಟೆಲ್ಲ ಸಚಿವರು ಅಗತ್ಯವಿಲ್ಲ ಎಂದು ಅಧ್ಯಕ್ಷರ ವಿರೋಧಿಗಳು ಟೀಕಿಸಿದ್ದಾರೆ. ಈ ಮೊದಲು ಸಚಿವಸಂಪುಟದಲ್ಲಿ 56 ಸಚಿವರಿದ್ದರು. ಇತ್ತೀಚೆಗೆ ಅಧ್ಯಕ್ಷ ಅಡೋ ಇನ್ನೂ 54 ಸಚಿವರನ್ನು ತನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು. ದೇಶದ ಅಭಿವೃದ್ಧಿಗೆ ಇಷ್ಟೆಲ್ಲ ಸಚಿವರ ಅಗತ್ಯವಿದೆ ಎಂದು ಅಧ್ಯಕ್ಷರು ವಾದಿಸಿದ್ದಾರೆ.
ಆದರೆ ಈ ಅಧ್ಯಕ್ಷರು ಇತ್ತೀಚೆಗೆ ಅಂದರೆ ಕಳೆದ ಡಿಸೆಂಬರ್‌ನಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಸಚಿವರ ಸಂಖ್ಯೆ ಹೆಚ್ಚಿಸುವುದು ದೊಡ್ಡ ವಿಷಯವಲ್ಲ. ಆದರೆ ಅಲ್ಲಿನ ಖಜಾನೆ ಕೂಡಾ ಅವರ ಭಾರವನ್ನು ವಹಿಸಿಕೊಳ್ಳಬೇಕಾಗಿದೆ. ಅಲ್ಲಿ, ಪ್ರತಿಯೊಬ್ಬ ಸಚಿವರಿಗೆ ತಿಂಗಳಿಗೆ ಎರಡೂವರೆ ಲಕ್ಷ ರೂಪಾಯಿಯಂತೆ ಸಂಬಳ ಸರಕಾರ ಕೊಡಬೇಕಾಗುತ್ತದೆ. ಮಾತ್ರವಲ್ಲ ಉಚಿತ ಇಂಧನ, ಎರಡು ಕಾರುಗಳು ಮನೆ, ಭದ್ರತಾ ವ್ಯವಸ್ಥೆ, ಹಾಗೂ ಇತರ ಸೌಕರ್ಯಗಳನ್ನು ಕೂಡಾ ಸಚಿವರಿಗೆ ನೀಡಬೇಕಾಗುತ್ತದೆ.