ಟ್ರಂಪ್ ಗೆ ತೀವ್ರ ಮುಖಭಂಗ
ವಾಶಿಂಗ್ಟನ್, ಮಾ. 25: ಅಮೆರಿಕದ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ‘ಒಬಾಮಕೇರ್’ ಯೋಜನೆಯನ್ನು ರದ್ದುಪಡಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಹತ್ವಾಕಾಂಕ್ಷೆಯ ಪ್ರಯತ್ನಗಳಿಗೆ ಶುಕ್ರವಾರ ತೀವ್ರ ಹಿನ್ನಡೆಯುಂಟಾಗಿದೆ.
ಒಬಾಮಕೇರ್ ಮಸೂದೆಯನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಿಂದ ಹಿಂದಕ್ಕೆ ಪಡೆಯಬೇಕಾದ ಅನಿವಾರ್ಯತೆಗೆ ಸರಕಾರ ಸಿಲುಕಿದ್ದು, ಟ್ರಂಪ್ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ನಿಯಂತ್ರಣದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನೂತನ ಆರೋಗ್ಯ ಮಸೂದೆಯನ್ನು ಅಂಗೀಕರಿಸಲು ಅಗತ್ಯವಾದ ಮತಗಳನ್ನು ಕ್ರೋಢೀಕರಿಸಲು ಸ್ಪೀಕರ್ ಪೌಲ್ ರಯಾನ್ ವಿಫಲರಾದರು. ಇದಕ್ಕೆ ಸ್ವತಃ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಕೆಲವು ಸಂಸದರ ವಿರೋಧವೇ ಕಾರಣವಾಗಿದೆ. ಆ ಪಕ್ಷದ ಕೆಲವು ಸಂಸದರು ‘ಫ್ರೀಡಂ ಕಾಕಸ್’ ಎಂಬ ಬ್ಯಾನರ್‌ನಲ್ಲಿ ಗುಂಪು ರಚಿಸಿಕೊಂಡು ಮಸೂದೆಯ ವಿರುದ್ಧವಾಗಿ ಕಾರ್ಯಾಚರಿಸಿದರು.
ಅಮೆರಿಕದ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಒಟ್ಟು ಸದಸ್ಯರ ಸಂಖ್ಯೆ 435. ಇಲ್ಲಿ ರಿಪಬ್ಲಿಕನ್ ಪಕ್ಷ 235 ಸದಸ್ಯರೊಂದಿಗೆ ಸರಳ ಬಹುಮತವನ್ನು ಹೊಂದಿದೆ.
ಆದರೆ, ಟ್ರಂಪ್ ಪರವಾಗಿ ಮಸೂದೆಯನ್ನು ಮಂಡಿಸುವ ಹೊಣೆಯನ್ನು ಹೊತ್ತಿದ್ದ ರಯಾನ್‌ಗೆ 215 ಮತಗಳನ್ನು ಮಾತ್ರ ಕಲೆ ಹಾಕಲು ಸಾಧ್ಯವಾಯಿತು.
ಭಾರತದಲ್ಲಿರುವಂತೆ ಅಮೆರಿಕದಲ್ಲಿ ಪಕ್ಷಾಂತರ ವಿರೋಧಿ ಕಾನೂನು ಇಲ್ಲ. ಹಾಗಾಗಿ, ಅಲ್ಲಿನ ಸಂಸದರು ತಮಗೆ ಸರಿಕಂಡಂತೆ ಮತ ಹಾಕಬಹುದು, ಪಕ್ಷದ ನಾಯಕತ್ವದ ಸೂಚನೆಯಂತೆ ಮತ ಹಾಕಬೇಕಿಲ್ಲ.
ಕೆಟ್ಟ ದಿನಗಳು ಬರಲಿವೆ: ಟ್ರಂಪ್
ತನ್ನ ಮಸೂದೆಯ ವೈಫಲ್ಯಕ್ಕೆ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರ ವಿರೋಧವೇ ಕಾರಣ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿಕ ದೂರಿದ್ದಾರೆ ಹಾಗೂ ಒಬಾಮಕೇರ್ ಮುಂದುವರಿಯಲಿದ್ದು, ಜನರ ವಿಮಾ ಪ್ರೀಮಿಯಂ ಮೊತ್ತ ಹೆಚ್ಚಲಿದೆ ಎಂದು ಎಚ್ಚರಿಸಿದ್ದಾರೆ.
‘‘ಅದು ಹಾಗೆಯೇ ಆಗುತ್ತದೆ. ಇಲ್ಲಿ ನೀವು ಮಾಡುವಂತಾದ್ದು ಹೆಚ್ಚೇನೂ ಇಲ್ಲ. ಕೆಟ್ಟ ಬೆಳವಣಿಗೆಗಳು ಇನ್ನು ಮುಂದೆ ನಡೆಯಲಿವೆ. ನಾನು ಇದನ್ನು ಒಂದೂವರೆ ವರ್ಷದಿಂದ ಹೇಳುತ್ತಾ ಬಂದಿದ್ದೇನೆ. ಅದನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಆದರೆ, ಇದಕ್ಕೆ ಪರಿಹಾರವಿಲ್ಲ’’ ಎಂದು ಮಸೂದೆಯನ್ನು ಹಿಂದಕ್ಕೆ ಪಡೆದ ಬಳಿಕ ಶ್ವೇತಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.