ಜಿನ್ನಾ ಹೌಸ್ ನೆಲಸಮಗೊಳಿಸಿ ಸಾಂಸ್ಕೃತಿಕ ಕೇಂದ್ರ ನಿರ್ಮಿಸಿ: ಬಿಜೆಪಿ ಶಾಸಕನ ಬೇಡಿಕೆ
Update: 2017-03-25 21:28 IST
ಮುಂಬೈ, ಮಾ.25: ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಆಲಿ ಜಿನ್ನಾ ಅವರ ದಕ್ಷಿಣ ಮುಂಬೈಯಲ್ಲಿರುವ ನಿವಾಸ ಜಿನ್ನಾ ಹೌಸ್ ನೆಲಸಮಗೊಳಿಸಿ ಅಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಿಸಬೇಕು ಎಂದು ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಬೇಡಿಕೆ ಮುಂದಿರಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಲೋಧಾ, ದೇಶ ವಿಭಜನೆಯ ಪಿತೂರಿಯ ಉಗಮಸ್ಥಾನವಾಗಿರುವ ಜಿನ್ನಾ ಹೌಸ್ , ದೇಶ ವಿಭಜನೆಯ ಸಂಕೇತವಾಗಿದೆ. ಆದ್ದರಿಂದ ಈ ಕಟ್ಟಡವನ್ನು ನೆಲಸಮಗೊಳಿಸಬೇಕು ಎಂದು ಆಗ್ರಹಿಸಿದರು. ಲೋಕೋಪಯೋಗೀ ಇಲಾಖೆಯು ಈ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ಲಕ್ಷಾಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಸಂಸತ್ತಿನಲ್ಲಿ ‘ಶತ್ರುಗಳ ಆಸ್ತಿ ಕಾಯ್ದೆ’ ಅಂಗೀಕಾರಗೊಂಡ ಬಳಿಕ ಜಿನ್ನಾ ಹೌಸ್ ನೆಲಸಮಗೊಳಿಸುವುದು ಏಕೈಕ ಆಯ್ಕೆಯಾಗಿದೆ ಎಂದವರು ಹೇಳಿದರು.