ಪತಿಯ ಸಂಪಾದನೆಯನ್ನು ಅವಲಂಬಿಸಬೇಡಿ: ಜೀವನಾಂಶ ಹೆಚ್ಚಳ ಕೋರಿದ್ದ ಮಹಿಳೆಗೆ ಕೋರ್ಟ್ ಸೂಚನೆ

Update: 2017-03-26 13:44 GMT

ದಿಲ್ಲಿ, ಮಾ.26: ತನಗೆ ನೀಡಲಾಗುತ್ತಿರುವ 5000 ರೂ. ಜೀವನಾಂಶವನ್ನು 25,000 ರೂ.ಗೆ ಹೆಚ್ಚಿಸಬೇಕೆಂದು ಮಹಿಳೆಯೋರ್ವಳು ಸಲ್ಲಿಸಿದ್ದ ಕೋರಿಕೆಯನ್ನು ದಿಲ್ಲಿಯ ನ್ಯಾಯಾಲಯವೊಂದು ತಳ್ಳಿ ಹಾಕಿದೆ.

 ಸೋಮಾರಿಯಂತೆ ಮನೆಯಲ್ಲಿ ಕುಳಿತು ಕಾಲಹರಣ ಮಾಡುತ್ತಾ, ಪತಿಯ ಸಂಪಾದನೆಯನ್ನು ಅವಲಂಬಿಸುವ ಮನೋಭಾವ ಸಲ್ಲದು ಎಂದು ಕೌಟುಂಬಿಕ ಕಲಹದ ಪ್ರಕರಣದಲ್ಲಿ ಪತಿಯಿಂದ ದೂರವಾಗಿ ಪ್ರತ್ಯೇಕ ವಾಸಿಸುತ್ತಿರುವ ಮಹಿಳೆಯೋರ್ವಳ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ತಿಳಿಸಿದರು.

  ಈ ಮಹಿಳೆಗೆ ಜೀವನಾಂಶವಾಗಿ ಪ್ರತೀ ತಿಂಗಳೂ 5,000 ರೂ. ನೀಡಬೇಕೆಂದು 2008ರಲ್ಲಿ ನ್ಯಾಯಾಲಯ ಆದೇಶಿಸಿತ್ತು. ಆ ಬಳಿಕ ಜೀವನವೆಚ್ಚ ಹೆಚ್ಚಿರುವ ಕಾರಣ ಜೀವನಾಂಶದಲ್ಲೂ ಏರಿಕೆ ಮಾಡಬೇಕು ಎಂದು ಮಹಿಳೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 2012ರಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿ ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಈ ಮೊತ್ತವನ್ನು 25,000 ರೂ.ಗೆ ಹೆಚ್ಚಿಸಬೇಕು ಎಂದು ಮಹಿಳೆ ಮತ್ತೆ ಮನವಿ ಮಾಡಿದ್ದರು.

ಈ ಮನವಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಕೆ.ತ್ರಿಪಾಠಿ, ಮಹಿಳೆ ತನ್ನ ಪರಿತ್ಯಕ್ತ ಪತಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾಳೆ. ಎಂ.ಎ, ಬಿ.ಎಡ್ ಮತ್ತು ಎಲ್‌ಎಲ್‌ಬಿ ವಿದ್ಯಾರ್ಹತೆ ಹೊಂದಿರುವ ಈಕೆ ಸ್ವಯಂ ಸಂಪಾದಿಸಲು ಸಾಕಷ್ಟು ಅವಕಾಶಗಳಿವೆ. ಅದು ಬಿಟ್ಟು ಮನೆಯಲ್ಲಿ ಸೋಮಾರಿಯಂತೆ ಕುಳಿತು ಪತಿಯ ಸಂಪಾದನೆಯನ್ನು ಅವಲಂಬಿಸಿರುವುದು ಸರಿಯಲ್ಲ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News