×
Ad

ಗುಜರಾತ್ ಶಿವಸೇನೆ ನಾಯಕನ ಹತ್ಯೆ ಪ್ರಕರಣ: ಸುಪ್ರೀಂನಿಂದ ಆರೋಪಿಗಳಿಗೆ ಜೀವಾವಧಿ ಖಾಯಂ

Update: 2017-03-26 19:19 IST

ಅಹ್ಮದಾಬಾದ್,ಮಾ.26: ಗುಜರಾತ್‌ನಲ್ಲಿ ಶಿವಸೇನಾ ನಾಯಕನೊಬ್ಬನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.ಗುಜರಾತ್‌ನ ಶಿವಸೇನೆಯ ತಾಲೂಕು ಘಟಕದ ಅಧ್ಯಕ್ಷ ರಮೇಶ್‌ಭಾಯ್ ಪ್ರಜಾಪತಿಯ ಹತ್ಯೆಗೆ ಬಳಸಲಾದ ಚೂರಿಯನ್ನು ಆರೋಪಿಗಳಿಂದ ವಶಪಡಿಸಿಕೊಂಡಿರುವುದು, ಹತ್ಯೆಯಲ್ಲಿ ಅವರು ಶಾಮೀಲಾಗಿರುವುದನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿದೆಯೆಂದು ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್ ಹಾಗೂ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠವು ತಿಳಿಸಿದೆ.

  ಗುಜರಾತ್‌ನ ಶಿವಸೇನೆಯ ತಾಲೂಕು ಘಟಕದ ಅಧ್ಯಕ್ಷ ರಮೇಶ್‌ಭಾಯ್ ಪ್ರಜಾಪತಿಯನ್ನು ಐದು ಮಂದಿಯ ಗುಂಪೊಂದು, ಮನೆಗೆ ನುಗ್ಗಿ ಹತ್ಯೆಗೈದಿತ್ತು. ಪತ್ನಿ ಮತ್ತು ಮಕ್ಕಳೊಂದಿಗೆ ನಿದ್ರಿಸುತ್ತಿದ್ದ ಪ್ರಜಾಪತಿಯ ಕುತ್ತಿಗೆಗೆ ಚೂರಿಯಿಂದ ಸೀಳಿ ಕೊಲೆಗೈಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯವು 2010ರಲ್ಲಿ ನೀಡಿದ ತೀರ್ಪಿನಲ್ಲಿ ಆರೋಪಿಗಳಾದ ಸೊಯೆಭಾಯ್ ಯೂಸುಫ್‌ಭಾಯ್ ಭರಾನಿಯಾ ಸೇರಿದಂತೆ ನಾಲ್ವರನ್ನು ದೋಷಿಗಳೆಂದು ಘೋಷಿಸಿ, ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಜನರ ತೀವ್ರವಿರೋಧದ ನಡುವೆಯೂ ರಮೇಶ್‌ಬಾಯ್‌ನ ಕಿರಿಯ ಸಹೋದರನು ಭಿನ್ನ ಕೋಮಿಗೆ ಸೇರಿದ ಯುವತಿಯನ್ನು ವಿವಾಹವಾಗಿದ್ದನು. ಆದಾಗ್ಯೂ ಆರೋಪಿಗಳಲ್ಲಿ ಒಬ್ಬನಾದ ಉಮರ್‌ಭಾಯ್‌ಗೆ ಸಂದೇಹದ ಲಾಭ ನೀಡಿದ ನ್ಯಾಯಾಲಯವು ಆತನನ್ನು ದೋಷಮುಕ್ತಗೊಳಿಸಿದೆ.

ವಿಚಾರಣಾ ನ್ಯಾಯಾಲಯದ ತೀರ್ಪನ್ನು ನಾಲ್ವರು ಆರೋಪಿಗಳು ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಇನ್ನೋರ್ವ ಆರೋಪಿಯನ್ನ ದೋಷಮುಕ್ತಗೊಳಿಸಿ, ಉಳಿದ ಮೂವರ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿತು. ತೀರ್ಪಿನ ವಿರುದ್ಧ ಆರೋಪಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News