ಬೀಫ್ ಅಭಾವ: ಉತ್ತರಾಖಂಡದ ಚಿರತೆಗಳಿಗೆ ಈಗ ಕೋಳಿಮಾಂಸವೇ ಗತಿ!
ಡೆಹ್ರಾಡೂನ್,ಮಾ.26: ನೆರೆಯ ರಾಜ್ಯವಾದ ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚುಗಡೆಗೊಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಹರಿದ್ವಾರ ಸಮೀಪದ ಪ್ರಸಿದ್ಧ ಮೃಗಾಲಯದಲ್ಲಿರುವ ಎಂಟು ವರ್ಷದ ಚಿರತೆ ‘ರೂಬಿ’ಗೆ ಆಕೆಯ ಅಚ್ಚುಮೆಚ್ಚಿನ ಆಹಾರವಾದ ಎಮ್ಮೆಮಾಂಸ ಈಗ ದೊರೆಯುತ್ತಿಲ್ಲ. ರೂಬಿಯಂತೆ ಉತ್ತರಾಖಂಡದ ಪ್ರಸಿದ್ಧ ಚಿಡಿಯಾಪುರ್ ವವ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿರುವ ಏಳು ಚಿರತೆಗಳು ಆಶ್ರಯ ಪಡೆದಿದ್ದು, ಅವು ಕೂಡಾ ಬೀಫ್ ಸೇವನೆಯಿಂದ ವಂಚಿತವಾಗಿವೆ. ಕಸಾಯಿಖಾನೆಗಳ ಮುಚ್ಚುಗಡೆಯಿಂದಾಗಿ ಆಡು,ಕುರಿ ಮಾಂಸದ ಅಭಾವವೂ ಉಂಟಾಗಿದ್ದು, ಈ ಮಾಂಸಹಾರಿಪ್ರಾಣಿಗಳಿಗೆ ಪರ್ಯಾಯ ಆಹಾರನ್ನು ಒದಗಿಸಲು ಅರಣ್ಯ ಅಧಿಕಾರಿಗಳು ಈಗ ಒದ್ದಾಡುತ್ತಿದ್ದಾರೆ. ಹೀಗಾಗಿ ಇದೇ ಮೊದಲ ಬಾರಿಗೆ ಈ ಚಿರತೆಗಳಿಗೆ ಕೋಳಿಮಾಂಸವನ್ನು ತಿನಿಸಲಾಗುತ್ತಿದೆ.
ನರಭಕ್ಷಕವೆಂದು ಘೋಷಿಸಲ್ಪಟ್ಟ ಹಾಗೂ ಬೇರೆ ಕಾರ್ಯಾಚರಣೆಗಳಲ್ಲಿ ಸೆರೆಹಿಡಿಯಲಾದ ಚಿರತೆಗಳನ್ನು ಈ ಸಂರಕ್ಷಣಾ ಕೇಂದ್ರದಲ್ಲಿ ತಂದುಬಿಡಲಾಗುತ್ತದೆ. ಈ ಚಿರತೆಗಳು ಏಳರಿಂದ 9 ವರ್ಷದೊಳಗಿನವಾಗಿದ್ದು, ಸಂಪೂರ್ಣವಾಗಿ ಬೆಳೆದಿವೆ.ಅವುಗಳಿಗೆ ಪ್ರತಿದಿನ ಆರು ಕೆ.ಜಿ. ಪ್ರೋಟಿನ್ ಹಾಗೂ ಕೊಬ್ಬಿನಿಂದ ಸಮೃದ್ಧವಾದ ಮಾಂಸದ ಅಗತ್ಯವಿದೆ. ಸಂರಕ್ಷಣಾ ಕೇಂದ್ರದಲ್ಲಿರುವ ವನ್ಯಮೃಗಗಳಿಗಾಗಿ ಸಾಮಾನ್ಯವಾಗಿ ಅರಣ್ಯ ಇಲಾಖೆಯು ನೆರೆಯ ರಾಜ್ಯ ಉತ್ತರಪ್ರದೇಶದ ಬಿಜನೋರ್ ಜಿಲ್ಲೆಯಿಂದ ಬೀಫ್ ಪೂರೈಕೆಗಾಗಿ ಪ್ರತಿವರ್ಷವೂ ಮಾಂಸವ್ಯಾಪಾರಿಗಳಿಂದ ಟೆಂಡರ್‌ಗಳನ್ನು ಆಹ್ವಾನಿಸುತ್ತದೆ.
ಶನಿವಾರ ಮೃಗಧಾಮಕ್ಕೆ ಆಹಾರವನ್ನು ಪೂರೈಕೆ ಮಾಡುತ್ತಿದ್ದ ಗುತ್ತಿಗೆದಾರನು, ಉತ್ತರಪ್ರದೇಶದ ಪ್ರಸಕ್ತ ಪರಿಸ್ಥಿತಿಯಲ್ಲಿ ತನಗೆ ಬೀಫ್ ಪೂರೈಕೆ ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದ್ದ. ಆನಂತರ ಅರಣ್ಯ ಇಲಾಖೆಯು ಚಿರತೆಗಳಿಗೆ ಕೋಳಿಮಾಂಸವನ್ನು ತಿನ್ನಿಸಿತು. ಆದರೆ ಪೂರ್ಣಪ್ರಮಾಣದಲ್ಲಿ ಬೆಳೆದ ಚಿರತೆಗಳಿಗೆ ಹಸಿವಿಗೆ ಬೀಫ್ ಹಾಗೂ ಆಡಿನ ಮಾಂಸವೇ ಬೇಕಾಗುತ್ತದೆ.
ಆದರೆ ಹರಿದ್ವಾರವು ಪ್ರಸಿದ್ಧ ಯಾತ್ರಾ ಸ್ಥಳವಾಗಿರುವುದರಿಂದ, ಜಿಲ್ಲೆಯಲ್ಲಿ ಕಸಾಯಿಖಾನೆಗಳಿಲ್ಲ. ಇದರಿಂದಾಗಿ ಅಡು ಅಥವಾ ಕುರಿಯ ಮಾಂಸವೂ ಲಭ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ಮಟನ್ ಬೀಫ್‌ಗಿಂತಲೂ ಹೆಚ್ಚು ದುಬಾರಿ. ಆಡಿನ ಮಾಂಸ ಪ್ರತಿ ಕೆ.ಜಿ.ಗೆ 350-400 ರೂ. ದರದಲ್ಲಿ ಲಭ್ಯವಿದೆ. ಆದರೆ ಬೀಫ್ ನಿಷೇಧಕ್ಕೆ ಮುನ್ನ ಕೇವಲ 170ರಿಂದ 230 ಕೆ.ಜಿ. ದರದಲ್ಲಿ ದೊರೆಯುತ್ತದೆ. ಉತ್ತರಾಖಂಡವು 2007ರಲ್ಲಿ ಗೋ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿದ್ದು, ರಾಜ್ಯದಲ್ಲಿ ದನ, ಎಮ್ಮೆ ಸೇರಿದಂತೆ ಎಲ್ಲಾ ವಿಧದ ಗೋಸಂತತಿಯ ಹತ್ಯೆಯನ್ನು ನಿಷೇಧಿಸಿದೆ. ಆದಾಗ್ಯೂ ನೆರೆಯ ರಾಜ್ಯದ ಉತ್ತರಪ್ರದೇಶದಲ್ಲಿ ಆದರೆ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವು ಕಳೆದ ವಾರ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚುಗಡೆಗೊಳಿಸುವುದಕ್ಕೆ ಎಮ್ಮೆ ಮಾಂಸ ಸುಲಭವಾಗಿ ದೊರೆಯುತ್ತಿತ್ತು.