×
Ad

ಧೋನಿ, ಅರ್ನಬ್‌ಗೆ ಪದ್ಮ ಪ್ರಶಸ್ತಿ ನಿರಾಕರಿಸಿದ ಕೇಂದ್ರ

Update: 2017-03-27 21:15 IST

ಹೊಸದಿಲ್ಲಿ,ಮಾ.27: ಕ್ರಿಕೆಟಿಗ ಎಂ.ಎಸ್.ಧೋನಿ, ವಿವಾದಾತ್ಮಕ ಅಧ್ಯಾತ್ಮಿಕ ಗುರು ಗುರ್ಮಿತ್ ರಾಮ್ ಹಾಗೂ ತಬಲಾ ವಾದಕ ಝಕೀರ್ ಹುಸೇನ್ ಸೇರಿದಂತೆ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಬೇಕೆಂಬ ಪ್ರಸ್ತಾಪಗಳನ್ನು ಕೇಂದ್ರ ಸರಕಾರ ತಿರಸ್ಕರಿಸಿತ್ತೆಂದು ಆಂಗ್ಲ ಪತ್ರಿಕೆಯೊಂದು ಬಹಿರಂಗಪಡಿಸಿದೆ.

   ದೇಶದ ಎರಡನೆ ಅತಿದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪುರಸ್ಕೃತರಾದ ಎನ್‌ಸಿಪಿ ನಾಯಕ ಶರದ್‌ಪವಾರ್ ಹಾಗೂ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರು ಪ್ರಶಸ್ತಿಗೆ ನಾಮಕರಣಗೊಂಡವರ ಪ್ರಾಥಮಿಕ ಪಟ್ಟಿಯಲ್ಲಿ ಇರಲಿಲ್ಲವೆಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಸೋಮವಾರ ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.ಆದಾಗ್ಯೂ ಈ ಇಬ್ಬರು ರಾಜಕೀಯ ಮುತ್ಸದ್ಧಿಗಳಿಗೆ ಕೇಂದ್ರ ಸರಕಾರದ ವಿಶೇಷಾಧಿಕಾರವಾದ ಸಾರ್ವಜನಿಕ ವ್ಯವಹಾರಗಳ ಶ್ರೇಣಿಯಡಿ ಪದ್ಮವಿಭೂಷಣ ಪುರಸ್ಕಾರ ನೀಡಲಾಗಿದೆಯೆಂದು ಸಂಬಂಧಿತ ಇಲಾಖೆಯ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

 ಪದ್ಮಪ್ರಶಸ್ತಿಗೆ ಪ್ರಸ್ತಾಪಗೊಂಡವರ ಪಟ್ಟಿಯಿಂದ ಕೇಂದ್ರ ಸರಕಾರ ಕೈಬಿಟ್ಟ ಗಣ್ಯರಲ್ಲಿ ಬಿಜು ಜನತಾದಳದ ಸಂಸದ ಬಿಜಯ್‌ಕಾಂತ್ ಪಂಡಾ, ಸಂಗೀತ ನಿರ್ದೇಶಕ ಅನುಮಲಿಕ್ ಹಾಗೂ ಪತ್ರಕರ್ತ ಅರ್ನಬ್ ಗೋಸ್ವಾಮಿ ಕೂಡಾ ಸೇರಿದ್ದಾರೆ. ಆದರೆ ಪ್ರಶಸ್ತಿಗೆ ಅವರ ನಾಮಕರಣವನ್ನು ತಿರಸ್ಕರಿಸಿರುವುದಕ್ಕೆ ಸರಕಾರ ಯಾವುದೇ ಕಾರಣ ನೀಡಿಲ್ಲ.

  ಈ ವರ್ಷ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಏಳು ಪದ್ಮವಿಭೂಷಣ, ಏಳು ಪದ್ಮಭೂಷಣ ಹಾಗೂ 75 ಪದ್ಮಶ್ರೀ ಪುರಸ್ಕಾರ ಸೇರಿದಂತೆ 89 ಮಂದಿಗೆ ಪದ್ಮ ಪುರಸ್ಕಾರಕ್ಕೆ ಅನುಮೋದನೆ ನೀಡಿದ್ದಾರೆ. ವಿವಾದಾತ್ಮಕ ‘ದೇರಾ ಸಾಚಾ ಸೌದಾ’ ಧಾರ್ಮಿಕ ಪಂಥದ ಮುಖ್ಯಸ್ಥ ಗುರು ಗುರ್ಮಿತ್ ರಾಮ್‌ರಹೀಮ್ ಸಿಂಗ್‌ಗೆ ಪದ್ಮ ಪ್ರಶಸ್ತಿಗೆ ಆಗ್ರಹಿಸಿ ಗರಿಷ್ಠ ಸಂಖ್ಯೆಯ ನಾಮನಿರ್ದೇಶನಗಳು ಬಂದಿದ್ದವು ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News