ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಜಾಕ್ಕೆ ಆಗ್ರಹ

Update: 2017-03-27 17:33 GMT

ಭೋಪಾಲ, ಮಾ.27: ವ್ಯಾಪಂ ಹಗರಣದ ಹಿನ್ನೆಲೆಯಲ್ಲಿ ನಿಯಂತ್ರಕ ಮತ್ತು ಮಹಾ ಲೆಕ್ಕಪರಿಶೋಧಕರು (ಸಿಎಜಿ) ಮಧ್ಯಪ್ರದೇಶದ ಸರಕಾರವನ್ನು ಝಾಡಿಸಿರುವ ಹಿನ್ನೆಲೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ , ಕಾಂಗ್ರೆಸ್ ಮುಖಂಡ ಅಜಯ್ ಸಿಂಗ್ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ವ್ಯಾಪಂ ಹಗರಣದ ಶಿವರಾಜ್ ಸಿಂಗ್ ಚೌಹಾಣ್ ಅವಧಿಯಲ್ಲೇ ಸಂಭವಿಸಿದೆ. ಈ ಬಗ್ಗೆ ಸಿಎಜಿ ವರದಿಯಲ್ಲಿ ಕೂಡಾ ರಾಜ್ಯ ಸರಕಾರವನ್ನು ದೂಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚೌಹಾಣ್ ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿರುವುದಾಗಿ ಅಜಯ್ ಸಿಂಗ್ ತಿಳಿಸಿದ್ದಾರೆ. ಮಧ್ಯಪ್ರದೇಶ ವೃತ್ತಿನಿರತ ಪರೀಕ್ಷಾ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಹಾಗೂ ಪರೀಕ್ಷಾ ಮಂಡಳಿಯ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಿಸುವ ಸಂದರ್ಭ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪವಿದ್ದು ಇದು ವ್ಯಾಪಂ ಹಗರಣ ಎಂದೇ ಹೆಸರಾಗಿದೆ. ಪರೀಕ್ಷಾ ಮಂಡಳಿಗೆ ನಿರ್ದೇಶಕರು ಮತ್ತು ನಿಯಂತ್ರಕರನ್ನು ನೇಮಿಸುವ ಸಂದರ್ಭ ರಾಜ್ಯ ಸರಕಾರ ‘ನಿಯಮಗಳನ್ನು ವ್ಯವಸ್ಥಿತವಾಗಿ ಬುಡಮೇಲುಗೊಳಿಸಿದೆ’ ಎಂದು ಸಿಎಜಿ ರಾಜ್ಯ ಸರಕಾರದ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಈ ಭಾರೀ ಹಗರಣಕ್ಕೆ ಸಂಬಂಧಿಸಿ ಇದುವರೆಗೆ 2,100 ಮಂದಿಯನ್ನು ಬಂಧಿಸಲಾಗಿದೆ ಮತ್ತು 55 ಎಫ್‌ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ 53 ಮಂದಿ ಮೃತಪಟ್ಟಿದ್ದಾರೆ . ಸುಮಾರು 2,500 ಮಂದಿ ಸಿಬಿಐ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಿಂದ ತನಿಖೆ ಎದುರಿಸುತ್ತಿದ್ದಾರೆ ಎಂದು ಅಜಯ್ ಸಿಂಗ್ ಹೇಳಿದ್ದಾರೆ. ಈ ಎಲ್ಲಾ ಪ್ರಕರಣಗಳೂ ಮುಖ್ಯಮಂತ್ರಿ ಚೌಹಾಣ್ ಅವರ ಅಧಿಕಾರಾವಧಿಯಲ್ಲೇ ಸಂಭವಿಸಿದೆ. ಹಗರಣ ಸಂಭವಿಸಿದಾಗ ಚೌಹಾಣ್ ಅವರು ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನೂ ಹೊಂದಿದ್ದರು. ‘ವ್ಯಾಪಂ’ ಮೂಲಕ ನೇಮಕ ಮಾಡಿಕೊಳ್ಳಲಾದ 1,378 ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ಸ್ವತಃ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ ಎಂದು ಅಜಯ್ ಸಿಂಗ್ ತಿಳಿಸಿದ್ದಾರೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News