×
Ad

25 ಲಕ್ಷ ಜನರ ಉದ್ಯೋಗಕ್ಕೆ ಕುತ್ತು?

Update: 2017-03-27 23:04 IST

ಲಕ್ನೊ, ಮಾ.27: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ರಾಜ್ಯದ ಅಕ್ರಮ ಕಸಾಯಿಖಾನೆಗಳ ವಿರುದ್ಧ ಸಾರಿರುವ ಸಮರವನ್ನು ವಿರೋಧಿಸಿ ರಾಜ್ಯಾದ್ಯಂತ ಮಾಂಸ ಮಾರಾಟಗಾರರು ಮುಷ್ಕರ ಹೂಡಿದ್ದಾರೆ. ಅಷ್ಟಕ್ಕೂ ಉತ್ತರ ಪ್ರದೇಶದಲ್ಲೆಷ್ಟು ಕಸಾಯಿಖಾನೆಗಳಿವೆ? ಅವುಗಳು ಎಷ್ಟು ಕೋಟಿ ವ್ಯವಹಾರ ನಡೆಸುತ್ತಿವೆಯೆಂಬ ಸ್ವಾರಸ್ಯಕಾರಿ ಮಾಹಿತಿ ಇಲ್ಲಿದೆ.

ದೇಶದಾದ್ಯಂತ ಸರಕಾರದಿಂದ ಅನುಮೋದಿಸಲ್ಪಟ್ಟ 72 ಕಸಾಯಿಖಾನೆಗಳಲ್ಲಿ 38 ಉತ್ತರ ಪ್ರದೇಶದಲ್ಲಿವೆ. ಇವುಗಳಲ್ಲಿ ನಾಲ್ಕು ಸರಕಾರದಿಂದ ನಡೆಸುವ ಕಸಾಯಿಖಾನೆಗಳಾಗಿದ್ದು ಇವುಗಳಲ್ಲಿ ಆಗ್ರಾ ಮತ್ತು ಸಹರಣಪುರದಲ್ಲಿರುವ ಕಸಾಯಿಖಾನೆಗಳು ಮಾತ್ರ ಕಾರ್ಯಾಚರಿಸುತ್ತಿವೆ. ಅಲಿಘರ್ ನಗರದಲ್ಲಿರುವ ಹಿಂದ್ ಆಗ್ರೋ ಐಎಂಪಿಪಿ 1996ರಲ್ಲಿ ಸ್ಥಾಪಿಸಲ್ಪಟ್ಟ ಉದ್ಯಮವಾಗಿದೆ. ರಾಜ್ಯದಲ್ಲಿರುವ ಮಾಂಸ ಸಂಸ್ಕರಣಾ ಘಟಕಗಳು ನೇರವಾಗಿ ಹಾಗೂ ಪರೋಕ್ಷವಾಗಿ 25 ಲಕ್ಷ ಜನರಿಗೆ ಉದ್ಯೋಗ ಒದಗಿಸುತ್ತಿವೆ.
ಉತ್ತರ ಪ್ರದೇಶದಲ್ಲಿರುವ ಹೆಚ್ಚಿನ ಕಸಾಯಿಖಾನೆಗಳು ಹಾಗೂ ಮಾಂಸ ಸಂಸ್ಕರಣಾ ಘಟಕಗಳು ರಫ್ತು ಆಧರಿತವಾಗಿವೆ. ಭಾರತದ ಎಮ್ಮೆ ಮಾಂಸಕ್ಕೆ ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಕಾರಣ ಅವುಗಳ ಬೆಲೆ ಕಡಿಮೆ ಹಾಗೂ ಅವು ಹಲಾಲ್ ಮಾಂಸವಾಗಿದೆ. ಹೀಗಿರುವಾಗ ಸ್ಥಳೀಯ ಮಾಂಸದ ಪೂರೈಕೆಯನ್ನು ಹೆಚ್ಚಾಗಿ ಅಕ್ರಮ ಕಸಾಯಿಖಾನೆಗಳೇ ಪೂರೈಸುತ್ತಿವೆ.
ಈ ಕಸಾಯಿಖಾನೆಗಳಲ್ಲಿ ಸರಾಸರಿ ದಿನವೊಂದಕ್ಕೆ 300ರಿಂದ 3,000 ಪ್ರಾಣಿಗಳ ಹತ್ಯೆ ನಡೆಸಲಾಗುತ್ತದೆ. ಇವುಗಲ್ಲಿ ಎಮ್ಮೆ, ಆಡು ಹಾಗೂ ಕುರಿ ಸೇರಿವೆ. ಹೆಚ್ಚಿನವು ತಮ್ಮ ಮಾಲಕರಿಗೆ ಉಪಯೋಗಕ್ಕೆ ಬಾರದ ಪ್ರಾಣಿಗಳಾಗಿವೆ ಹಾಗೂ ವರ್ತಕರಿಂದ ಸಾಪ್ತಾಹಿಕ ಮಂಡಿ ಬಝಾರ್‌ಗಳಲ್ಲಿ ಖರೀದಿಸಲಾಗುತ್ತದೆ. ಎಮ್ಮೆಯೊಂದರ ಬೆಲೆ ಸರಿಸುಮಾರು ರೂ. 20,000 ಆಗಿದೆ. ಒಂದು ಐಎಂಪಿಪಿ ಘಟಕ ಸ್ಥಾಪಿಸಲು ಅಂದಾಜು ರೂ. 40 ಕೋಟಿಯಿಂದ ರೂ. 50 ಕೋಟಿಯ ಅಗತ್ಯವಿದೆ. ರಾಜ್ಯದ ಕಸಾಯಿಖಾನೆಗಳಿಗೆ 15 ವರ್ಷ ಹಾಗೂ ಮೇಲ್ಪಟ್ಟ ಎಮ್ಮೆಗಳನ್ನು ಕೊಲ್ಲುವ ಅಧಿಕಾರವಿದೆ.
ಮಾಂಸ ತಯಾರಿ ಹಾಗೂ ರಫ್ತು ಕ್ಷೇತ್ರದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಉತ್ತರ ಪ್ರದೇಶಕ್ಕಿದೆ. ರಾಜ್ಯದಲ್ಲಿ ಸುಮಾರು 150 ಕಸಾಯಿಖಾನೆಗಳು ಹಾಗೂ 50,000ಕ್ಕೂ ಅಧಿಕ ಮಾಂಸದಂಗಡಿಗಳು ಪರವಾನಿಗೆಯಿಲ್ಲದೆ ಕಾರ್ಯಾಚರಿಸುತ್ತಿವೆ. ದೇಶದ ಒಟ್ಟು ಮಾಂಸ ಉತ್ಪಾದನೆಯಲ್ಲಿ ಶೇ.19.1 ಪಾಲು ಉತ್ತರ ಪ್ರದೇಶದ್ದಾಗಿದೆ.
ವಾರ್ಷಿಕ ರೂ. 26,685 ಕೋಟಿ ಮೊತ್ತದ ಮಾಂಸ ರಾಜ್ಯದಿಂದ ರಫ್ತಾಗುತ್ತಿದೆ. ಮಾಂಸದ ಮೇಲಿನ ನಿಷೇಧದಿಂದಾಗಿ ರಾಜ್ಯದ ಬೊಕ್ಕಸಕ್ಕೆ ರೂ. 11,350 ಕೋಟಿ ನಷ್ಟವುಂಟಾಗುವ ಸಂಭವವಿದೆ. ಮುಂದಿನ ಐದು ವರ್ಷಗಳ ಕಾಲ ಸ್ಥಿತಿ ಹೀಗೆಯೇ ಮುಂದುವರಿದರೆ ನಷ್ಟ ರೂ. 56,000 ಕೋಟಿಗೆ ಏರಬಹುದು ಎಂದು ಹೇಳಲಾಗುತ್ತಿದೆ.
2015-16ರಲ್ಲಿ ಉತ್ತರ ಪ್ರದೇಶ 5,65,958.20 ಮೆಟ್ರಿಕ್ ಟನ್ನುಗಳಷ್ಟು ಎಮ್ಮೆ ಮಾಂಸ ರಫ್ತು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News