×
Ad

ನೈಜೀರಿಯಾ ವಿದ್ಯಾರ್ಥಿಗಳ ಮೇಲೆ ಗುಂಪು ಹಲ್ಲೆ, ಆದಿತ್ಯನಾಥ್ ಸರಕಾರದಿಂದ ಸೂಕ್ತ ತನಿಖೆಯ ಭರವಸೆ

Update: 2017-03-28 18:21 IST

ಗ್ರೇಟರ್ ನೊಯ್ಡ,ಮಾ.28: ದಿಲ್ಲಿ ಸಮೀಪದ ಗ್ರೇಟರ್ ನೊಯ್ಡದಲ್ಲಿ ನೈಜೀರಿಯಾ ವಿದ್ಯಾರ್ಥಿಗಳ ಮೇಲೆ ಗುಂಪು ಹಲ್ಲೆ ಕುರಿತು ಸಮಗ್ರ ತನಿಖೆಯನ್ನು ನಡೆಸುವುದಾಗಿ ಮತ್ತು ಶೀಘ್ರವೇ ವರದಿಯನ್ನು ಸಲ್ಲಿಸುವುದಾಗಿ ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಸರಕಾರವು ಭರವಸೆ ನೀಡಿದೆ.

ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಹಲ್ಲೆಗೊಳಗದ ಮೂವರು ನೈಜೀರಿಯಾ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೃಹತ್ ಗುಂಪೊಂದು ಓರ್ವ ವಿದ್ಯಾರ್ಥಿಯನ್ನು ಒದೆಯುವ,ಗುದ್ದುವ ಮತ್ತು ಶಾಪಿಂಗ್ ಮಾಲ್‌ನಲ್ಲಿಯ ಸ್ಟೀಲ್ ಡಸ್ಟ್‌ಬಿನ್‌ಗಳಿಂದ ಹೊಡೆಯುವ ದೃಶ್ಯಗಳು ಮೊಬೈಲ್‌ವೊಂದರ ಮೂಲಕ ಚಿತ್ರೀಕರಿಸ ಲಾದ ವೀಡಿಯೊದಲ್ಲಿ ಸೆರೆಯಾಗಿವೆ.

ಈವರೆಗೆ ಏಳು ಜನರನ್ನು ಬಂಧಿಸಲಾಗಿದ್ದು, ಸುಮಾರು 300 ಅಪರಿಚಿತರ ವಿರುದ್ಧ ಕೊಲೆ ಯತ್ನ ಮತ್ತು ಹಿಂಸಾಚಾರದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಇನ್ನಷ್ಟು ಜನರನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ತಾನು ಉ.ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದು, ಘಟನೆಯ ಕುರಿತು ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಬೆಳಿಗ್ಗೆ ಟ್ವೀಟಿಸಿದ್ದಾರೆ.

 ಗ್ರೇಟರ್ ನೊಯ್ಡದಲ್ಲಿ ವಾಸವಿರುವ ಆಫ್ರಿಕನ್ ವಿದ್ಯಾರ್ಥಿಯೋರ್ವ ಸ್ವರಾಜ್‌ಗೆ ಟ್ವೀಟ್ ಮಾಡಿ ಚುರುಕಿನ ಕ್ರಮಕ್ಕೆ ಕೋರಿದ್ದಲ್ಲದೆ, ಈ ಪ್ರದೇಶದಲ್ಲಿ ವಾಸ್ತವ್ಯ ಜೀವ ಬೆದರಿಕೆಯನ್ನುಂಟು ಮಾಡುತ್ತಿದೆ ಎಂದು ಹೇಳಿಕೊಂಡಿದ್ದ. ವಿದ್ಯಾರ್ಥಿಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಸ್ವರಾಜ್ ಈ ಬಗ್ಗೆ ಆದಿತ್ಯನಾಥ್ ಜೊತೆ ದೂರವಾಣಿ ಯಲ್ಲಿ ಮಾತನಾಡಿದ್ದರು.

ನೈಜೀರಿಯಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ಗಂಭೀರವಾದ ವಿಷಯವಾಗಿದೆ. ಸೂಕ್ತ ತನಿಖೆಯನ್ನು ನಡೆಸಿ,ಶೀಘ್ರವೇ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಉ.ಪ್ರದೇಶದ ಹಿರಿಯ ಸಚಿವ ಸಿದ್ಧಾರ್ಥ ಸಿಂಗ್ ಇಂದಿಲ್ಲಿ ತಿಳಿಸಿದರು.

 ಸೋಮವಾರ ಸಂಜೆ 12ನೇ ತರಗತಿಯ ವಿದ್ಯಾರ್ಥಿ ಮನೀಷ್ ಖಾರಿಯ ಸಾವಿನ ವಿರುದ್ಧ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಸ್ಥಳೀಯ ನಿವಾಸಿಗಳು ಮೋಂಬತ್ತಿ ಬೆಳಕಿನ ಪ್ರತಿಭಟನಾ ಜಾಥಾದಲ್ಲಿ ಸಾಗುತ್ತಿದ್ದಾಗ ಶಾಪಿಂಗ್ ಮಾಲ್ ಮತ್ತು ಇತರೆಡೆಗಳಲ್ಲಿ ಕೆಲವು ನೈಜೀರಿಯಾ ವಿದ್ಯಾರ್ಥಿಗಳು ಕಂಡು ಬಂದಿದ್ದರು. ಜಾಥಾದಲ್ಲಿದ್ದ ಕೆಲವು ಪುಂಡರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

 ಮನೀಷ್ ನಿವಾಸವಿರುವ ಪ್ರದೇಶದಲ್ಲಿ ವಾಸವಿರುವ ಆಫ್ರಿಕನ್ನರು ಆತನಿಗೆ ಮಾದಕ ದ್ರವ್ಯ ಒದಗಿಸಿದ್ದರು ಎನ್ನುವುದು ಸ್ಥಳೀಯರ ಆರೋಪವಾಗಿದೆ. ಒಂದು ದಿನವಿಡೀ ನಾಪತ್ತೆಯಾಗಿದ್ದ ಮನೀಷ್ ಮರುದಿನ ಮನೆಸಮೀಪದ ಪೊದೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಹೃದಯಾಘಾತದಿಂದ ಮೃತನಾಗಿದ್ದ.

ನೈಜೀರಿಯಾ ವಿದ್ಯಾರ್ಥಿಗಳು ಪೂರೈಸಿದ್ದ ಮಾದಕ ದ್ರವ್ಯಗಳ ಅತಿಯಾದ ಸೇವನೆ ತಮ್ಮ ಮಗನ ಸಾವಿಗೆ ಕಾರಣ ಎಂದು ಮನೀಷ್‌ನ ಹೆತ್ತವರು ಆರೋಪಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಸಾವಿಗೆ ನಿಖರ ಕಾರಣವನ್ನು ತಿಳಿಸಲಿದೆ ಎಂದು ಹಿರಿಯ ಪೊಲಿಸ್ ಅಧಿಕಾರಿ ದಲ್ಜೀತ್ ಸಿಂಗ್ ತಿಳಿಸಿದರು. ಆಫ್ರಿಕನ್ ವಿದ್ಯಾರ್ಥಿಗಳು ವಾಸವಿರುವ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News