ರೆಡ್ ಕಾರ್ನರ್ ನೋಟಿಸ್‌ಗೆ ಇಂಟರ್‌ಪೋಲ್ ನಿರಾಕರಣೆಯಿಂದ ತಲೆಯ ಮೇಲಿನ ತೂಗುಗತ್ತಿ ಸರಿದಿದೆ:ಲಲಿತ್ ಮೋದಿ

Update: 2017-03-28 14:01 GMT

ಹೊಸದಿಲ್ಲಿ,ಮಾ.28: ತನ್ನ ಗಡೀಪಾರಿಗಾಗಿ ರೆಡ್ ಕಾರ್ನರ್ ನೊಟೀಸ್ ಹೊರಡಿಸ ಬೇಕೆಂಬ ಭಾರತದ ಕೋರಿಕೆಯನ್ನು ಇಂಟರ್‌ಪೋಲ್ ತಿರಸ್ಕರಿಸಿದ್ದು, ತನ್ನ ತಲೆಯ ಮೇಲಿನ ತೂಗುಗತ್ತಿ ಹಠಾತ್ ದೂರವಾಗಿದೆ ಎಂದು ಕೋಟ್ಯಂತರ ರೂ.ಗಳ ಭ್ರಷ್ಟಾಚಾರದ ಆರೋಪವನ್ನು ಹೊತ್ತಿರುವ ಐಪಿಎಲ್ ಸ್ಥಾಪಕ ಲಲಿತ್ ಮೋದಿ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಭಾರೀ ಭ್ರಷ್ಟಾಚಾರಗಳನ್ನು ನಡೆಸಿದ ಆರೋಪಗಳೊಂದಿಗೆ 2010ರಲ್ಲಿ ಭಾರತವನ್ನು ತೊರೆದಿದ್ದ ಮೋದಿ (50) ಕಳೆದ ಕೆಲವು ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ. ಆಗಿನಿಂದಲೂ ಭಾರತಕ್ಕೆ ಮರಳಲು ನಿರಾಕರಿಸುತ್ತಿರುವ ಅವರು ತನಗೆ ಭೂಗತ ಲೋಕದಿಂದ ಜೀವ ಬೆದರಿಕೆಗಳಿವೆ ಎಂದು ಆರೋಪಿಸುತ್ತಿದ್ದಾರೆ.

ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್‌ನ ಮೂಲಕ ಯಾವುದೇ ದೇಶವು ಅಪೇಕ್ಷಿತ ವ್ಯಕ್ತಿಯ ಬಂಧನ ಮತ್ತು ಗಡೀಪಾರಿಗೆ ಕೋರಬಹುದಾಗಿದೆ. ಮೋದಿ ಟ್ವೀಟಿಸಿರುವ ಪತ್ರವೊಂದು ‘‘ಸದ್ಯಕ್ಕೆ ಲಲಿತ ಮೋದಿ ತನ್ನ ರೆಡ್ ನೋಟಿಸ್‌ನ ವಿಷಯವಾಗಿಲ್ಲ ಮತ್ತು ತನ್ನ ದತ್ತಾಂಶ ಸಂಚಯದಲ್ಲಿ ಅವರ ಬಗ್ಗೆ ಮಾಹಿತಿಗಳಿಲ್ಲ’’ಎಂದು ಇಂಟರ್‌ಪೋಲ್ ಹೇಳಿರುವುದನ್ನು ಉಲ್ಲೇಖಿಸಿದೆ.

ಇಂಟರ್‌ಪೋಲ್ ಕೊನೆಗೂ ತನಿಖೆ ಕೈಗೊಂಡು ತನ್ನ ಪರವಾಗಿ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ರೆಡ್ ಕಾರ್ನರ್ ನೋಟಿಸ್ ಹೊರಡಿಸಬೇಕೆಂಬ ಭಾರತದ ಮನವಿಯನ್ನು ತಿರಸ್ಕರಿಸಿದೆ ಎಂಬ ಸುದ್ದಿ ತನ್ನ ಕಿವಿಗೆ ಬಿದ್ದಾಗ ತಾನು ಸಂಪೂರ್ಣವಾಗಿ ನಿಶ್ಚೇಷ್ಟಿತಗೊಂಡಿದ್ದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿಯ ತನ್ನ ಪೋಸ್ಟ್‌ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

ತನ್ನ ಸ್ನೇಹಿತರು ಮತ್ತು ಬೆಂಬಲಿಗರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುವ ಅವರು,ತಾನೀಗ ಹೊಸ ಆರಂಭಕ್ಕೆ ಸಜ್ಜಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮೋದಿ ವಿರುದ್ಧ 2015ರಲ್ಲಿ ಜಾಮೀನುರಹಿತ ಬಂಧನ ವಾರಂಟ್‌ನ್ನು ಹೊರಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News