ಸೇನಾಯೋಧನ ಆತ್ಮಹತ್ಯೆ ಪ್ರಕರಣ: ಕುಟುಕು ಕಾರ್ಯಾಚರಣೆ ಪತ್ರಕರ್ತೆಯ ಬಂಧನ
ನಾಸಿಕ್,ಮಾ.28: ಈ ತಿಂಗಳ ಆರಂಭದಲ್ಲಿ ನಾಸಿಕ್ ಬಳಿ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕೇರಳದ ಯೋಧನೊಬ್ಬನ ವಿವಾದಿತ ವಿಡಿಯೋ ಚಿತ್ರೀಕರಿಸಿದ್ದ ದಿಲ್ಲಿಯ ಸುದ್ದಿ ವೆಬ್‌ಸೈಟ್ ಒಂದರ ಪತ್ರಕರ್ತೆಯ ವಿರುದ್ಧ ನಾಸಿಕ್ ಪೊಲೀಸರು ಮಂಗಳವಾರ ಮೊಕದ್ದಮೆ ದಾಖಲಿಸಿದ್ದಾರೆ. ಸೇನೆಯಲ್ಲಿ ರೂಢಿಯಲ್ಲಿರುವ ಸಹಾಯಕ್ ವ್ಯವಸ್ಥೆಯಡಿ ಮೇಲಾಧಿಕಾರಿಗಳು ಯೋಧರನ್ನು ತಮ್ಮ ಮನೆಕೆಲಸಗಳಿಗೆ ಬಳಸಿ ಕೊಳ್ಳುತ್ತಿರುವುದರ ಬಗ್ಗೆ ಬೆಳಕುಚೆಲ್ಲಲು ಪೂನಂ ಈ ಕುಟುಕು ಕಾರ್ಯಾಚರಣೆ ನಡೆಸಿದ್ದರು.
ನಿಷೇಧಿತ ಪ್ರದೇಶಗಳನ್ನು ಅಕ್ರಮವಾಗಿ ಪ್ರವೇಶಿಸಿ, ಚಿತ್ರೀಕರಣ ನಡೆಸುವ ಮೂಲಕ ಸೇನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಆಕೆಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆಯೆಂದು ಸ್ಥಳೀಯ ಠಾಣಾಧಿಕಾರಿ ವಿನಾಯಕ್ ಲೋಕಾರೆ ತಿಳಿಸಿದ್ದಾರೆ.
ಪೂನಂ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 305 (ಆತ್ಮಹತ್ಯೆಗೆ ಪ್ರೇರಣೆ), 451 (ಕ್ರಿಮಿನಲ್ ಸ್ವರೂಪದ ಅತಿಕ್ರಮಣ), 500 (ಮಾನಹಾನಿ) ಹಾಗೂ 34 (ಸಮಾನವಾದ ಕ್ರಿಮಿನಲ್ ಉದ್ದೇಶ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪತ್ರಕರ್ತೆಯ ವಿರುದ್ಧ ಸ್ಥಳೀಯ ಸೇನಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
ಪೂನಂ ಆಗರ್‌ವಾಲ್ ಅವರು ಫೆಬ್ರವರಿ 24ರಂದು ರಾಯ್ ಮ್ಯಾಥ್ಯೂ ಹಾಗೂ ಇತರ ಸೇನಾಜವಾನರನ್ನು ಭೇಟಿಯಾಗಿ ಕುಟುಕು ಕಾರ್ಯಾಚರಣೆ ನಡೆಸಿದ್ದರು. ಸೇನಾಧಿಕಾರಿಗಳ ಅನುಮತಿ ಇಲ್ಲದೆ ನಾಸಿಕ್‌ನ ದಿಯೊಲಾಲಿ ಸೇನಾನೆಲೆಯೊಳಗೆ ಪ್ರವೇಶಿಸಿದ ಆರೋಪವನ್ನು ಆಕೆ ಎದುರಿಸುತ್ತಿದ್ದಾರೆ.
ಮಾರ್ಚ್ 2ರಂದು ಮ್ಯಾಥ್ಯೂ(33)ನ ಮೃತದೇಹವು ದಿಯೊಲಾಲಿ ಸೇನಾನೆಲೆಯ ಕೊಠಡಿಯಯೊಂದರ ಸೀಲಿಂಗ್‌ಫ್ಯಾನ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುಟುಕು ಕಾರ್ಯಾಚರಣೆಯ ವಿಡಿಯೋದಲ್ಲಿ ತಾನು ನೀಡಿದ್ದ ಹೇಳಿಕೆಗಾಗಿ ಸೇನಾಧಿಕಾರಿಗಳು ತನ್ನ ವಿರುದ್ಧ ಕ್ರಮ ಕೈಗೊಳ್ಳಬಹುದೆಂಬ ಭೀತಿಯಿಂದ ತಾನು ಸಾವಿಗೆ ಶರಣಾಗಿರುವುದಾಗಿ ಮ್ಯಾಥ್ಯೂ ಬರೆದಿದ್ದ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು.