ಇರಾನ್‌ನ ಸೇನಾ ನೆಲೆಗಳನ್ನು ಬಳಸಲು ರಶ್ಯಕ್ಕೆ ಅನುಮತಿ

Update: 2017-03-28 15:59 GMT

ಟೆಹರಾನ್, ಮಾ. 28: ಸಿರಿಯದಲ್ಲಿರುವ ‘ಭಯೋತ್ಪಾದಕ’ರ ವಿರುದ್ಧ ವಾಯು ದಾಳಿ ನಡೆಸಲು ರಶ್ಯ ಇರಾನ್‌ನ ಸೇನಾ ನೆಲೆಗಳನ್ನು ಬಳಸಬಹುದಾಗಿದೆ, ಆದರೆ, ಇದಕ್ಕಾಗಿ ಪ್ರತಿಯೊಂದು ದಾಳಿಗೂ ರಶ್ಯ ಇರಾನ್‌ನಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಇರಾನ್‌ನ ವಿದೇಶ ಸಚಿವ ಮುಹಮ್ಮದ್ ಜಾವೇದ್ ಝರೀಫ್ ಮಂಗಳವಾರ ರಾಯ್ಟರ್ಸ್‌ಗೆ ತಿಳಿಸಿದರು.

ರಶ್ಯ ಮತ್ತು ಇರಾನ್ ಎರಡೂ ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸದ್‌ರ ಪ್ರಮುಖ ಮಿತ್ರರಾಗಿದ್ದಾರೆ. ಕಳೆದ 18 ತಿಂಗಳುಗಳ ಅವಧಿಯಲ್ಲಿ ಸಿರಿಯದ ಅಂತರ್ಯುದ್ಧದಲ್ಲಿ ಅಸದ್ ಸರಕಾರದ ಕೈಮೇಲಾಗುವಲ್ಲಿ ಈ ಎರಡು ದೇಶಗಳು ಮಹತ್ವದ ಪಾತ್ರ ವಹಿಸಿದ್ದವು.

ಕಳೆದ ವರ್ಷ ಸಿರಿಯದ ಬಂಡುಕೋರರ ನೆಲೆಗಳ ಮೇಲೆ ವಾಯು ದಾಳಿ ನಡೆಸಲು ರಶ್ಯದ ವಿಮಾನಗಳು ಇರಾನ್‌ನಲ್ಲಿನ ವಾಯು ನೆಲೆಯೊಂದನ್ನು ಬಳಸಿಕೊಂಡಿದ್ದವು. ಎರಡನೆ ಮಹಾಯುದ್ಧದ ಬಳಿಕ ವಿದೇಶದ ವಿಮಾನಗಳು ಇರಾನ್ ಸೇನಾ ನೆಲೆಯನ್ನು ಬಳಸಿದ್ದು ಅದೇ ಮೊದಲ ಬಾರಿಯಾಗಿತ್ತು.

ಆದರೆ, ಈ ವ್ಯವಸ್ಥೆ ಅನಿರೀಕ್ಷಿತವಾಗಿ ಕೊನೆಗೊಂಡಿತ್ತು. ವಿದೇಶಿ ಸೇನೆಗಳು ಇರಾನ್‌ನ ಸೇನಾ ನೆಲೆಗಳನ್ನು ಬಳಸುವುದು ಸಂವಿಧಾನಬಾಹಿರ ಎಂಬುದಾಗಿ ಇರಾನ್‌ನ ಕೆಲವು ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ವಿಷಯವನ್ನು ಬಹಿರಂಗಪಡಿಸಿರುವುದಕ್ಕಾಗಿ ಇರಾನ್‌ನ ರಕ್ಷಣಾ ಸಚಿವರು ಮಾಸ್ಕೊವನ್ನು ತರಾಟೆಗೆ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News