ಎಮ್ಮೆ-ಕೋಣಗಳು ಪೂಜ್ಯನೀಯ ಪ್ರಾಣಿಗಳಲ್ಲವೇ?
Update: 2017-03-29 15:07 IST
ಮಾನ್ಯರೆ, ಎಮ್ಮೆ-ಕೋಣ ಎಂಬ ಪ್ರಾಣಿಗಳು ನಿಜವಾಗಿ ಭಾರತದ ಮೂಲದ್ದಾಗಿದೆ, ಆದರೆ ಹಸು-ಹೋರಿ ಇದು ಆರ್ಯ ಜನಾಂಗದವರು ಮಧ್ಯ ಏಶ್ಯಾದಿಂದ ಭಾರತಕ್ಕೆ ವಲಸೆ ಬರುವಾಗ ತಂದಿರುವ ವಿದೇಶಿ ಪ್ರಾಣಿಗಳು. ಹಾಗಾಗಿ ಹಸು-ಎತ್ತು ಭಾರತೀಯ ಮೂಲದ ಪ್ರಾಣಿ ಅಲ್ಲವೇ ಅಲ್ಲ. ಈಗಲೂ ಹಳ್ಳಿಯ ಹೆಚ್ಚಿನ ಜನರು ತಮ್ಮ ಚಿಕ್ಕ ಮಕ್ಕಳಿಗೆ ಎಮ್ಮೆಯ ಹಾಲನ್ನು ಕುಡಿಸುತ್ತಾರೆಯೇ ಹೊರತು ಹಸುವಿನ ಹಾಲನ್ನು ಅಲ್ಲ. ಭಾರತದಲ್ಲಿ ಹಳ್ಳಿಯ ಶೇ. 80 ಜನರು ಎಮ್ಮೆ ಹಾಲು ಅಥವಾ ಮೇಕೆ-ಕುರಿ-ಒಂಟೆಯ ಹಾಲು ಕುಡಿಯುತ್ತಾರೆ.
ಮೇಕೆಯ ಹಾಲು ಮಕ್ಕಳಿಗೆ ಎಲ್ಲಕ್ಕಿಂತ ಹೆಚ್ಚು ಪೌಷ್ಟಿಕ ಎಂದು ಆಹಾರ ತಜ್ಞರೇ ಹೇಳುತ್ತಾರೆ. ಹಾಗಾದರೆ ಬಡ ಜನರ ತಾಯಿಯ ಸ್ಥಾನದಲ್ಲಿರುವ ಎಮ್ಮೆ ಮತ್ತು ಮೇಕೆಯನ್ನು ಸಹಾ ಮಾಂಸಕ್ಕಾಗಿ ಕೊಲ್ಲುವುದನ್ನೂ ತಕ್ಷಣ ಕೇಂದ್ರ ಸರಕಾರ ನಿಷೇಧಿಸಲಿ ಹಾಗೂ ‘‘ವಿದೇಶಕ್ಕೆ ರಫ್ತು ಮಾಡುತ್ತಿರುವುದು ಗೋಮಾಂಸವಲ್ಲ, ಅದು ಎಮ್ಮೆ-ಕೋಣಗಳ ಮಾಂಸ’’’ ಎಂಬ ಕಳ್ಳ ಸಬೂಬು ಹೇಳುವುದನ್ನು ಬಿಜೆಪಿಯವರು ನಿಲ್ಲಿಸಲಿ.