ಕೆನ್ಯಾ ವಿದ್ಯಾರ್ಥಿನಿಯಿಂದ ಸುಳ್ಳು ಆರೋಪ:ಆಫ್ರಿಕನ್ ವಿದ್ಯಾರ್ಥಿ ಸಂಘದ ಸ್ಪಷ್ಟನೆ
ಗ್ರೇಟರ್ ನೊಯ್ಡ,ಮಾ.30: ಬುಧವಾರ ಬೆಳಿಗ್ಗೆ ಗುಂಪೊಂದು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದ ಸ್ಥಳೀಯ ನಿವಾಸಿ, ಕೆನ್ಯಾ ಮೂಲದ ವಿದ್ಯಾರ್ಥಿನಿ ಮಾರಿಯಾ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದಾಳೆ ಎಂದು ಭಾರತದಲ್ಲಿಯ ಆಫ್ರಿಕನ್ ವಿದ್ಯಾರ್ಥಿಗಳ ಸಂಘ (ಎಎಎಸ್‌ಐ)ವು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿ ಸಿದೆ.
ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಎಸ್‌ಪಿ ಧಮೇಂದ್ರ ಸಿಂಗ್ ಯಾದವ ಅವರು,ವಿದ್ಯಾರ್ಥಿನಿಯ ಮೇಲೆ ಹಲ್ಲೆ ಘಟನೆಯನ್ನು ಆಟೋ ಚಾಲಕ ನಿರಾಕರಿಸಿದ್ದಾನೆ ಎಂದು ತಿಳಿಸಿದರು.
ತಾನು ಆಟೋದಲ್ಲಿ ಕಾಲೇಜಿಗೆ ಪ್ರಯಾಣಿಸುತ್ತಿದ್ದಾಗ ಗುಂಪೊಂದು ಅಡ್ಡಗಟ್ಟಿ ತನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ಮಾರಿಯಾ ಪೊಲೀಸ್ ದೂರು ನೀಡಿದ್ದಲ್ಲದೆ, ಆಸ್ಪತ್ರೆಗೂ ದಾಖಲಾಗಿದ್ದಳು.
ಪ್ರಕರಣವನ್ನು ಹಿಂದೆಗೆದುಕೊಳ್ಳಲು ನಿರ್ಧರಿಸಿರುವ ಕೆನ್ಯಾ ರಾಯಭಾರಿ ಕಚೇರಿಯು, ಸುಳ್ಳುದೂರನ್ನು ನೀಡಿದ್ದಕ್ಕಾಗಿ ಮಾರಿಯಾ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ್ದಾರೆಂದು ತಿಳಿಸಿದೆ.
ಈ ಘಟನೆ ತಮಗೆಲ್ಲ ಮುಜುಗರವನ್ನುಂಟು ಮಾಡಿದೆ ಎಂದು ಹೇಳಿದ ಎಎಎಸ್‌ಐ ಉಪಾಧ್ಯಕ್ಷ ಚಾರ್ಲ್ಸ್ ಕೆನೆಡಿ ಅವರು, ಕೌಟುಂಬಿಕ ಸಮಸ್ಯೆಗಳಿಂದ ಮಾರಿಯಾ ಮಾನಸಿಕ ತೊಂದರೆಗೊಳಗಾಗಿದ್ದಾಳೆ ಎಂದು ತಿಳಿಸಿದರು.