ವಂದೇ ಮಾತರಂ ಹಾಡದ್ದಕ್ಕಾಗಿ ಏಳು ಕಾರ್ಪೊರೇಟರ್‌ಗಳನ್ನು ನಿಷೇಧಿಸಿದ ಮೀರತ್ ಮೇಯರ್

Update: 2017-03-30 13:40 GMT

ಮೀರತ್(ಉ.ಪ್ರ.),ಮಾ.30: ಮೀರತ್ ಮಹಾನಗರ ಪಾಲಿಕೆಯ ಸದನದಲ್ಲಿ ಇತರ ಸದಸ್ಯರು ವಂದೇ ಮಾತರಂ ಹಾಡುತ್ತಿದ್ದಾಗ ಏಳು ಮುಸ್ಲಿಂ ಸದಸ್ಯರ ಗುಂಪೊಂದು ಸಭಾತ್ಯಾಗ ಮಾಡಿದ್ದು, ಅವರನ್ನು ಸದಸ್ಯತ್ವದಿಂದ ವಜಾಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.

ವಂದೇ ಮಾತರಂ ಅನ್ನು ವಿರೋಧಿಸುವ ಯಾವುದೇ ಸದಸ್ಯರಿಗೆ ಸದನದಲ್ಲಿ ಸ್ವಾಗತವಿರುವದಿಲ್ಲ ಎಂದೂ ಮೇಯರ್ ಹರಿಕಾಂತ ಅಹ್ಲುವಾಲಿಯಾ(ಬಿಜೆಪಿ) ಅವರು ಮಂಡಿಸಿದ ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.

ವಂದೇ ಮಾತರಂ ಹಾಡಲು ಶರಿಯಾ ಕಾನೂನು ತಮಗೆ ಅನುಮತಿಸುವುದಿಲ್ಲ, ಆದ್ದರಿಂದ ಅದರ ಬಹಿಷ್ಕಾರವನ್ನು ತಾವು ಮುಂದುವರಿಸುತ್ತೇವೆ ಮತ್ತು ಅಗತ್ಯವಾದರೆ ಈ ವಿಷಯದಲ್ಲಿ ನ್ಯಾಯಾಲಯದ ಮೆಟ್ಟಿಲುಗಳನ್ನೇರುತ್ತೇವೆ ಎಂದು ಮುಸ್ಲಿಂ ಸದಸ್ಯರು ಹೇಳಿದರು.

ಮಂಗಳವಾರ ಸದನದ ಇತರ ಸದಸ್ಯರು ವಂದೇ ಮಾತರಂ ಹಾಡಲಾರಂಭಿಸಿದಾಗ ಏಳು ಮುಸ್ಲಿಂ ಸದಸ್ಯರು ಸಭಾತ್ಯಾಗ ಮಾಡಿದ್ದು, ಸ್ವಲ್ಪ ಸಮಯ ಬಳಿಕ ವಾಪಸಾಗಿದ್ದರು. ಆದರೆ ತಾನು ಅವರನ್ನು ಒಳಗೆ ಬಿಟ್ಟುಕೊಳ್ಳಲು ನಿರಾಕರಿಸಿದ್ದೆ. ಅವರನ್ನು ಸದಸ್ಯತ್ವದಿಂದ ವಜಾಗೊಳಿಸುವ ನಿರ್ಣಯವನ್ನು ಬುಧವಾರ ಅಂಗೀಕರಿಸಲಾಗಿದೆ ಎಂದ ಅಹ್ಲುವಾಲಿಯಾ, ಇದೊಂದು ಗಂಭೀರ ವಿಷಯವಾಗಿದೆ.

ಮುಸ್ಲಿಂ ಸದಸ್ಯರನ್ನು ಹೊರತು ಪಡಿಸಿ ಇತರ ಸದಸ್ಯರು ಅದನ್ನು ಹಾಡುವ ಪ್ರಾಮಾಣಿಕತೆ ಹೊಂದಿದ್ದಾರೆ. ವಂದೇ ಮಾತರಂ ವಿರೋಧಿಗಳಾಗಿರುವ ಸದಸ್ಯರು ಸದನಕ್ಕೆ ಬರಲು ನಾವು ಅವಕಾಶ ನೀಡುವುದಿಲ್ಲ. ಅಗತ್ಯವಾದರೆ ಜೈಲಿಗೂ ಹೋಗಲು ನಾವು ಸಿದ್ಧರಿದ್ದೇವೆ ಎಂದರು.

ಮೇಯರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸದಸ್ಯ ಶಾಹಿದ್ ಅಬ್ಬಾಸಿ ಅವರು, ನಾವು ನಮ್ಮ ದೇಶಕ್ಕಾಗಿ ನಮ್ಮ ಪ್ರಾಣವನ್ನೇ ನೀಡಲು ಸಿದ್ಧರಾಗಿದ್ದರೂ ನಮ್ಮನ್ನು ಅನುಮಾನದಿಂದಲೇ ನೋಡಲಾಗುತ್ತಿದೆ ಎಂದರು.

ನಮ್ಮ ಧರ್ಮ,ಶರಿಯಾ ಕಾನೂನು ವಂದೇ ಮಾತರಂ ಅನ್ನು ಒಪ್ಪಿಕೊಳ್ಳುವುದಿಲ್ಲ. ನಾವು ರಾಜೀನಾಮೆ ನೀಡಲು ಸಿದ್ಧರಾಗಿದ್ದೇವೆ,ಆದರೆ ಅದನ್ನು ಹಾಡುವುದಿಲ್ಲ ಎಂದು ಸದಸ್ಯರಾದ ದಿವಾನ್‌ಜಿ ಶರೀಫ್ ಮತ್ತು ಅರ್ಶದ್ ಉಲ್ಲಾ ತಿಳಿಸಿದರು.

ತಮ್ಮ ಸದಸ್ಯತ್ವವನ್ನು ರದ್ದುಗೊಳಿಸುವ ಮೇಯರ್ ಪ್ರಸ್ತಾವವನ್ನು ‘ತುಘ್ಲಕ್ ಆದೇಶ’ ವೆಂದು ಬಣ್ಣಿಸಿದ ಅವರು, ಈ ಬಗ್ಗೆ ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News