ಉ.ಪ್ರದೇಶದಲ್ಲಿ ಹಳಿ ತಪ್ಪಿದ ರೈಲು : 52 ಮಂದಿಗೆ ಗಾಯ
ಲಕ್ನೊ, ಮಾ.30: ಜಬಲ್‌ಪುರ- ನಿಝಾಮುದ್ದೀನ್ ಸ್ಟೇಷನ್ ನಡುವೆ ಸಂಚರಿಸುವ ಮಹಾಕೌಶಲ್ ಎಕ್ಸ್‌ಪ್ರೆಸ್ ರೈಲು ಇಂದು ಬೆಳಿಗ್ಗೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕುಲ್ಪಹಾರ್ ಸ್ಟೇಷನ್ ಬಳಿ ಹಳಿ ತಪ್ಪಿದ ಕಾರಣ ಕನಿಷ್ಠ 52 ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಮತ್ತು ಅಲ್ಪಪ್ರಮಾಣದಲ್ಲಿ ಗಾಯಗೊಂಡವರಿಗೆ 25000 ರೂ. ಪರಿಹಾರ ಧನವನ್ನು ರಾಜ್ಯ ಸರಕಾರ ಘೋಷಿಸಿದೆ.
ಹಳಿಗಳ ಅಸಮರ್ಪಕ ಜೋಡಣೆ ದುರಂತಕ್ಕೆ ಕಾರಣ ಎಂದು ಆರಂಭಿಕ ಪರಿಶೀಲನೆಯಿಂದ ತಿಳಿದು ಬಂದಿದೆ. ಆದರೆ ವಿಧ್ವಂಸಕ ಕೃತ್ಯದ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು ಎಂದು ತಿಳಿಸಿರುವ ರಾಜ್ಯದ ಆರೋಗ್ಯ ಸಚಿವ ಸಿದ್ದಾರ್ಥ ನಾಥ್ ಸಿಂಗ್, ಘಟನೆಯ ಬಗ್ಗೆ ರಾಷ್ಟ್ರೀಯ ತನಿಖಾ ಮಂಡಳಿ ತನಿಖೆ ನಡೆಸಲಿದೆ . ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ನಿಖೆಯಲ್ಲಿ ಸಹಕರಿಸಲಿದೆ ಎಂದಿದ್ದಾರೆ.
ಎಟಿಎಸ್, ರೈಲ್ವೇ ಪೊಲೀಸರು ಘಟನಾ ಸ್ಥಳದಲ್ಲಿದ್ದಾರೆ. ರಾಷ್ಟ್ರೀಯ ತನಿಖಾ ಮಂಡಳಿ ಮತ್ತು ಉತ್ತರ ಪ್ರದೇಶ ಪೊಲೀಸರು ಜಂಟಿಯಾಗಿ ತನಿಖೆ ನಡೆಸಲಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿಯವರಿಗೆ ವರದಿ ನೀಡಲಿದ್ದೇನೆ ಎಂದು ಸಚಿವರು ತಿಳಿಸಿದರು.
ಅಪಘಾತ ಪರಿಹಾರ ರೈಲು, 15 ಪ್ಯಾಸೆಂಜರ್ ರೈಲುಗಳು ಹಾಗೂ 20 ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಗಾಯಗೊಂಡವರನ್ನು ಮಹೋಬಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರ ಮತ್ತು ರೈಲ್ವೇ ಇಲಾಖೆಯ ಸಿಬ್ಬಂದಿಗಳ ನೆರವಿನಿಂದ ಪೊಲೀಸರು ರೈಲ್ವೇ ಬೋಗಿಗಳಲ್ಲಿ ಸಿಕ್ಕಿಬಿದ್ದಿದ್ದ ಪ್ರಯಾಣಿಕರನ್ನು ರಕ್ಷಿಸಿದರು.
52 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇವರಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಝಾನ್ಸಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮಹೋಾದ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ಸುಮಾರು 18 ರೈಲುಗಳ ಸಂಚಾರವನ್ನು ರದ್ದುಪಡಿಸಲಾಯಿತು ಮತ್ತು ಆರಕ್ಕೂ ಹೆಚ್ಚು ರೈಲುಗಳ ಮಾರ್ಗವನ್ನು ಬದಲಿಸಲಾಯಿತು.
ಘಟನೆಯ ಬಗ್ಗೆ ತನಿಖೆ ನಡೆಸಲು ಉತ್ತರ ಕೇಂದ್ರ ರೈಲ್ವೇಯು ಸಮಿತಿಯೊಂದನ್ನು ರಚಿಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.