ಎ.1ರಿಂದ ವಿಮಾನ ನಿಲ್ದಾಣಗಳಲ್ಲಿ ನೂತನ ಭದ್ರತಾ ವ್ಯವಸ್ಥೆ
ಹೊಸದಿಲ್ಲಿ, ಮಾ.30: ಪ್ರಯಾಣಿಕರ ಕೈಚೀಲಗಳ ಮೇಲೆ ಮುದ್ರೆಯೊತ್ತುವುದು, ಅವುಗಳ ಮೇಲೆ ಲೇಬಲ್ ಅಂಟಿಸುವುದು ಮುಂತಾದ ಪ್ರಕ್ರಿಯೆಗಳಿಗೆ ದೇಶದ ಏಳು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಎಪ್ರಿಲ್ 1ರಿಂದ ತಿಲಾಂಜಲಿ ನೀಡಲು ನಿರ್ಧರಿಸಲಾಗಿದೆ.
ದಿಲ್ಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತಾ, ಕೊಚ್ಚಿ ಮತ್ತು ಅಹ್ಮದಾಬಾದ್ ವಿಮಾನ ನಿಲ್ದಾಣಗಳಲ್ಲಿ ಎಪ್ರಿಲ್ 1ರಿಂದ ನೂತನ ಭದ್ರತಾ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಿಐಎಸ್‌ಎಫ್ ತಿಳಿಸಿದೆ.
ಈ ಹಿಂದೆಯೇ ಈ ನೂತನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ನಾಗರಿಕ ವಿಮಾನಯಾನ ಭದ್ರತಾ ಕಾರ್ಯಾಲಯ ಘೋಷಿಸಿತ್ತಾದರೂ, ಈ ಬಗ್ಗೆ ವಿಮಾನ ನಿಲ್ದಾಣಗಳಲ್ಲಿ ಸೂಕ್ತ ಕ್ರಮ ಕೈಗೊಂಡ ಬಳಿಕ ನೂತನ ವ್ಯವಸ್ಥೆ ಜಾರಿಗೊಳಿಸಬೇಕೆಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಭಿಪ್ರಾಯಪಟ್ಟಿತ್ತು.
ಇದೀಗ ನೂತನ ವ್ಯವಸ್ಥೆಯ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ಕುರಿತು ಮಾಡಿಕೊಳ್ಳಲಾಗಿರುವ ಸಿದ್ಧತೆಗಳನ್ನು ಖುದ್ದು ವೀಕ್ಷಿಸಿರುವುದಾಗಿ ಸಿಐಎಸ್‌ಎಫ್ ನಿರ್ದೇಶಕ ಜ. ಒ.ಪಿ.ಸಿಂಗ್ ತಿಳಿಸಿದ್ದು, ಇದು ಪ್ರಯಾಣಿಕರಿಗೆ ತೊಂದರೆ ರಹಿತ ಪ್ರಯಾಣಕ್ಕೆ ಪೂರಕವಾಗಲಿದೆ ಎಂದು ಹೇಳಿದ್ದಾರೆ.