×
Ad

ನಾಳೆ ಎಸ್‌ಬಿಐನೊಂದಿಗೆ ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನ

Update: 2017-03-31 21:15 IST

ತಿರುವನಂತಪುರ,ಮಾ.31: ‘ಕೇರಳದ ಸ್ವಂತ ಬ್ಯಾಂಕ್’ ಎಂಬ ಗೌರವಕ್ಕೆ ಪಾತ್ರವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು (ಎಸ್‌ಬಿಟಿ) ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆ್ಯಂಡ್ ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಳಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಎ.1ರಿಂದ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)ನಲ್ಲಿ ವಿಲೀನಗೊಳ್ಳಲಿವೆ ಮತ್ತು ಅವುಗಳ ಆಸ್ತಿಗಳು ಮಾತೃಬ್ಯಾಂಕ್‌ಗೆ ವರ್ಗಾವಣೆಗೊಳ್ಳಲಿವೆ.

ಕಳೆದ 35 ವರ್ಷಗಳ ಕಾಲ ಎಸ್‌ಬಿಟಿಯಲ್ಲಿ ದುಡಿದು ನಾಳೆಯಿಂದ ನಾವು ಇನ್ನೊಂದು ಹೆಸರಿನಲ್ಲಿ ಕಾರ್ಯಾಚರಿಸಲಿದ್ದೇವೆ ಎನ್ನುವುದು ಸ್ವಲ್ಮ ಮಟ್ಟಿಗೆ ಭಾವನಾತ್ಮಕ ವಿಷಯವಾಗಿದೆ ಎಂದು ಎಸ್‌ಬಿಟಿಯ ಹಿರಿಯ ಅಧಿಕಾರಿಯೋರ್ವರು ಹೇಳಿದರು. ಎಸ್‌ಬಿಐನೊಂದಿಗೆ ವಿಲೀನಗೊಳ್ಳುತ್ತಿರುವ ಈ ಎಲ್ಲ ಬ್ಯಾಂಕ್‌ಗಳ ಶಾಖೆಗಳು ಇನ್ನು ಮುಂದೆ ಮಾತೃಬ್ಯಾಂಕಿನ ಹೆಸರಿನಲ್ಲಿ ಕಾರ್ಯ ನಿರ್ವಹಿಸಲಿವೆ.

ಎಸ್‌ಬಿಟಿ ಸುಮಾರು 14,000 ಉದ್ಯೋಗಿಗಳನ್ನು ಹೊಂದಿದೆ.

‘ಕೇರಳದ ಸ್ವಂತ ಬ್ಯಾಂಕ್’ನ ಗೌರವಾರ್ಥ ರಾಜ್ಯ ಅಂಚೆ ಇಲಾಖೆಯು ಎಸ್‌ಬಿಟಿಯ ಲಾಂಛನಗಳಿರುವ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಿದೆ.

ಎಸ್‌ಬಿಟಿ 1945ರಲ್ಲಿ ತಿರುವಾಂಕೂರು ಬ್ಯಾಂಕ್ ಹೆಸರಿನಲ್ಲಿ ಆಗಿನ ತಿರುವಾಂಕೂರು ಸಂಸ್ಥಾನದ ಪ್ರವರ್ತನೆಯಲ್ಲಿ ಸ್ಥಾಪನೆಗೊಂಡಿತ್ತು. 1959ರಲ್ಲಿ ಅದು ಎಸ್‌ಬಿಐನ ಸಹವರ್ತಿ ಬ್ಯಾಂಕ್ ಆಗಿ ಪರಿವರ್ತನೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News