ನೆರೆಯ ರಾಷ್ಟ್ರಗಳಿಗೆ ವಿದ್ಯುತ್ ರಫ್ತು : ಚೀನಾಕ್ಕೆ ಸವಾಲೆಸೆಯಲು ಮೋದಿ ತಂತ್ರ
ಹೊಸದಿಲ್ಲಿ, ಮಾ.31: ಇದೇ ಪ್ರಪ್ರಥಮ ಬಾರಿಗೆ ಭಾರತವು ವಿದ್ಯುತ್ ಶಕ್ತಿಯನ್ನು ರಫ್ತು ಮಾಡುವ ಹಂತಕ್ಕೆ ತಲುಪಿದ್ದು , ನೆರೆಹೊರೆಯ ಕೆಲವು ಸಣ್ಣ ರಾಷ್ಟ್ರಗಳಿಗೆ ವಿದ್ಯುತ್ ಶಕ್ತಿಯ ಕೊರತೆ ನೀಗಿಸುವಲ್ಲಿ ನೆರವಾಗುವ ಮೂಲಕ ಈ ರಾಷ್ಟ್ರಗಳು ಚೀನಾ ಪರ ಹೊಂದಿರುವ ಧೋರಣೆಯಲ್ಲಿ ಗಮನಾರ್ಹ ಬದಲಾವಣೆ ತರಲು ಭಾರತ ಮುಂದಾಗಿದೆ.
ಕಳೆದ ಎಪ್ರಿಲ್‌ನಿಂದ ಫೆಬ್ರವರಿ ವರೆಗಿನ ಅವಧಿಯಲ್ಲಿ ಭೂತಾನ್‌ನಿಂದ ಖರೀದಿಸಿದ 5.6 ಬಿಲಿಯನ್ ಯೂನಿಟ್ ವಿದ್ಯುತ್‌ಗಿಂತ 213 ಮಿಲಿಯನ್ ಯೂನಿಟ್‌ನಷ್ಟು ಹೆಚ್ಚು ವಿದ್ಯುತ್ ಅನ್ನು ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ವಿದ್ಯುತ್ ಇಲಾಖೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.
‘ಪೂರ್ವದತ್ತ ನೋಡು’ ಎಂಬ 1990ರ ಕಾರ್ಯನೀತಿಯನ್ನು ಪ್ರಧಾನಿ ಮೋದಿ ‘ಪೂರ್ವದತ್ತ ಕ್ರಿಯಾಶೀಲನಾಗು’ ಎಂದು ಉನ್ನತೀಕರಿಸಿದ್ದು ವಿಶ್ವದ ಅತ್ಯಂತ ಕನಿಷ್ಠ ಆರ್ಥಿಕ ಬೆಳವಣಿಗೆ ಹೊಂದಿರುವ ರಾಷ್ಟ್ರಗಳ ಮೇಲೆ ಪ್ರಭಾವ ಬೀರುವ ಚೀನಾದ ಆಶಯಕ್ಕೆ ಸವಾಲೊಡ್ಡುವ ಇರಾದೆ ಹೊಂದಿದೆ. ಭಾರತದ ಬದ್ಧವೈರಿ ಪಾಕಿಸ್ತಾನದಲ್ಲಿ ವಿದ್ಯುತ್ ಶಕ್ತಿ ಯೋಜನೆಗಳಿಗೆ ಹಣ ಸುರಿಯುತ್ತಿರುವ ಚೀನಾ, ಮ್ಯಾನ್ಮಾರ್‌ನ ನೂತನ ಸರಕಾರದ ಮೇಲೂ ಪ್ರಭಾವ ಬೀರಲು ಯತ್ನಿಸುತ್ತಿದೆ.
ವಿದ್ಯುತ್ ಶಕ್ತಿಯ ರಫ್ತು ಪ್ರಕ್ರಿಯೆಯಲ್ಲಿ ಆಗುತ್ತಿರುವ ಬೆಳವಣಿಗೆಯು - ಪ್ರಾದೇಶಿಕ ಸಂಯೋಜನೆಯನ್ನು ಬಲಪಡಿಸುವ ಭಾರತ ಸರಕಾರದ ಹೊಸ ವಿದೇಶ ಕಾರ್ಯನೀತಿಗೆ ಪೂರಕವಾಗಿದೆ ಎಂದು ‘ಒಬ್ಸರ್ವರ್ ರಿಸರ್ಚ್ ಫೌಂಡೇಶನ್’ನ ಚಿಂತಕಿ ಜೊಯಿಟಾ ಭಟ್ಟಾಚಾರ್ಜಿ ತಿಳಿಸಿದ್ದಾರೆ.
ನೇಪಾಳದಲ್ಲಿ ಭಾರತದ 57 ಬಿಲಿಯನ್ ರೂ. ವೆಚ್ಚದ ಜಲ ವಿದ್ಯುತ್ ಯೋಜನೆಗೆ ಭಾರತದ ಸಂಪುಟ ಕಳೆದ ತಿಂಗಳು ಅನುಮೋದನೆ ನೀಡಿತ್ತು. ಈ ಯೋಜನೆಯಂತೆ ವರ್ಷಕ್ಕೆ 900 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು ಮತ್ತು 25 ವರ್ಷಗಳ ಒಪ್ಪಂದದ ಅವಧಿಯಲ್ಲಿ ಇದರ ಶೇ.22ರಷ್ಟು ವಿದ್ಯುತ್ ನೇಪಾಳಕ್ಕೆ ಉಚಿತವಾಗಿ ದೊರೆಯಲಿದೆ.