×
Ad

ಆಸ್ಟ್ರೇಲಿಯ: ಭೀಕರ ಪ್ರವಾಹ; ಮೇಲ್ಛಾವಣಿಗಳಲ್ಲಿ ಜೀವ ಉಳಿಸಿಕೊಂಡ ನಿವಾಸಿಗಳು

Update: 2017-03-31 21:38 IST

ಸಿಡ್ನಿ, ಮಾ. 31: ಪ್ರಬಲ ಚಂಡಮಾರುತ ಅಪ್ಪಳಿಸಿದ ಆಸ್ಟ್ರೇಲಿಯದ ಪೂರ್ವ ಕರಾವಳಿಯಲ್ಲಿ ಪ್ರವಾಹದಿಂದ ಮೈದುಂಬಿದ ನದಿಗಳು ಶುಕ್ರವಾರ ಹಲವಾರು ಪಟ್ಟಣಗಳನ್ನು ಆವರಿಸಿವೆ. ರಸ್ತೆಗಳು ಕೊಚ್ಚಿಹೋಗಿದ್ದು ನಿವಾಸಿಗಳು ತಮ್ಮ ಮನೆಗಳ ಮೇಲ್ಛಾವಣಿಗಳಲ್ಲಿ ನೇತಾಡುತ್ತಿದ್ದಾರೆ ಹಾಗೂ ದೋಣಿಗಳಲ್ಲಿ ಸ್ಥಳಾಂತರಗೊಳ್ಳುತ್ತಿದ್ದಾರೆ.

ಲಿಸ್ಮೋರ್ ಪಟ್ಟಣದಲ್ಲಿ ವಿಲ್ಸನ್ ನದಿ ಅಪಾಯದ ಮಟ್ಟವನ್ನು ಮೀರಿ ಹರಿದಾಗ ಮುಂಜಾನೆ ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲಾಯಿತು. ಸೂರ್ಯೋದಯದ ಹೊತ್ತಿಗೆ ನ್ಯೂಸೌತ್‌ವೇಲ್ಸ್ ರಾಜ್ಯದ ಸುಮಾರು 25,000 ಜನಸಂಖ್ಯೆಯ ಪಟ್ಟಣದ ಕೇಂದ್ರ ಭಾಗ ನೀರಿನಡಿಯಲ್ಲಿತ್ತು.

ನೀರು ಮೇಲ್ಛಾವಣಿ ಮಟ್ಟದಲ್ಲಿತ್ತು ಹಾಗೂ ಕಾರುಗಳು, ತೊಟ್ಟಿಗಳು ಮತ್ತು ಇತರ ವಸ್ತುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವು. ಆ ಹೊತ್ತಿಗೆ ಜನರು ಅಲ್ಲಿಂದ ಸ್ಥಳಾಂತರಗೊಂಡಿದ್ದರು ಹಾಗೂ ಜಾನುವಾರುಗಳನ್ನು ಎತ್ತರದ ಪ್ರದೇಶಗಳಿಗೆ ಸಾಗಿಸಲಾಗಿತ್ತು.

‘‘ಎಲ್ಲ ಘಟನೆಗಳು ನಡೆಯುತ್ತಿವೆ. ಮೇಲ್ಛಾವಣಿಗಳಲ್ಲಿ ಜನರಿದ್ದಾರೆ. ವ್ಯಾನ್‌ಗಳಲ್ಲಿ ಜನರು ಸಿಕ್ಕಿಹಾಕಿಕೊಂಡಿದ್ದಾರೆ. ಇದೊಂದು ಭೀಕರ ವಿಪತ್ತು’’ ಎಂದು ನ್ಯೂಸೌತ್‌ವೇಲ್ಸ್ ರಾಜ್ಯದ ತುರ್ತು ಸೇವೆಗಳ ಕಂಟ್ರೋಲರ್ ಇಯಾನ್ ಲೆಕಿ ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್ (ಎಬಿಸಿ) ರೇಡಿಯೊಗೆ ಹೇಳಿದರು.

ಮಂಗಳವಾರ ಕ್ವೀನ್ಸ್‌ಲ್ಯಾಂಡ್ ರಾಜ್ಯಕ್ಕೆ ಅಪ್ಪಳಿಸಿರುವ ಡೆಬ್ಬೀ ಚಂಡಮಾರುತ ಈಗ ಮಳೆ ಸುರಿಸುವ ಬೃಹತ್ ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ.
ಶುಕ್ರವಾರದ ಬಿರುಗಾಳಿಯಿಂದಾಗಿ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News