ಕೇರಳ ಸಚಿವನ ಅಶ್ಲೀಲ ಸಂಭಾಷಣೆಯ ಕುಟುಕು ಕಾರ್ಯಾಚರಣೆಯೇ ನಕಲಿ : ಕ್ಷಮೆ ಯಾಚಿಸಿದ ಟಿವಿ ಚಾನಲ್
ತಿರುವನಂತಪುರಂ, ಮಾ.31: ಕೇರಳದಲ್ಲಿ ಭಾರೀ ವಿವಾದ ಹುಟ್ಟಿಸಿ ಸಚಿವರೋರ್ವರ ತಲೆದಂಡಕ್ಕೆ ಕಾರಣವಾಗಿದ್ದ ಸಚಿವರ ಅಶ್ಲೀಲ ಸಂಭಾಷಣೆ ಪ್ರಕರಣಕ್ಕೆ ಇದೀಗ ಅನಿರೀಕ್ಷಿತ ತಿರುವು ದೊರೆತಿದೆ.
ಸಚಿವರು ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ಅಶ್ಲೀಲ ಸಂಭಾಷಣೆಯ ಕುಟುಕು ಕಾರ್ಯಾಚರಣೆಯೇ ನಕಲಿ ಎಂದು ತಿಳಿಸಿರುವ ಮಂಗಳಂ ಟಿವಿ ಚಾನೆಲ್‌ನ ಸಿಇಒ ಅಜಿತ್ ಕುಮಾರ್, ಇದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ.
ಈ ಕುಟುಕು ಕಾರ್ಯಾಚರಣೆ ನಡೆಸಿದ್ದ ವರದಿಗಾರ್ತಿ ಅಲ್-ನೀಮಾ ಅಶ್ರಫ್ ಬುಧವಾರ ತನ್ನ ಫೇಸ್‌ಬುಕ್‌ನಲ್ಲಿ ಕುಟುಕು ಕಾರ್ಯಾಚರಣೆಯ ವಿವರ ಪೋಸ್ಟ್ ಮಾಡಿದ್ದರು. ‘ಸಭೆಯಲ್ಲಿ ನಮ್ಮ ‘ಟಾರ್ಗೆಟ್’ ಆಗಿರುವ ಅಧಿಕಾರಿಗಳ ಪಟ್ಟಿಯೊಂದನ್ನು ನೀಡಲಾಯಿತು. ಈ ಅಧಿಕಾರಿಗಳನ್ನು ಬಹು ಸುಲಭವಾಗಿ ಬಲೆಗೆ ಬೀಳಿಸಬಹುದು ಎಂದು ಹೇಳಿದ್ದರು ’ ಎಂದು ಹೇಳಿಕೊಂಡಿದ್ದರು.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಚಾನೆಲ್‌ನ ಸಿಇಒ ಸ್ಪಷ್ಟೀಕರಣ ನೀಡಿ ಕ್ಷಮೆ ಯಾಚಿಸಿದ್ದಾರೆ. ಇದೊಂದು ನಕಲಿ ಕುಟುಕು ಕಾರ್ಯಾಚರಣೆಯಾಗಿದ್ದು ತಮ್ಮ ಚಾನೆಲ್‌ನ ವರದಿಗಾರರ ತಂಡವೊಂದು ಇದನ್ನು ಚಿತ್ರೀಕರಿಸಿದೆ ಎಂದು ನೀಮಾ ಅಶ್ರಫ್ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು.
ಈ ತಪ್ಪು ಮುಂದೆಂದೂ ಮರುಕಳಿಸದು. ಭವಿಷ್ಯದಲ್ಲಿ ಹೀಗಾಗದಂತೆ ನಮ್ಮ ಸಂಪಾದಕೀಯ ವಿಭಾಗ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಸಾರಿಗೆ ಸಚಿವ ಶಶೀಂದ್ರನ್ ತಮ್ಮಂದಿಗೆ ದೂರವಾಣಿಯಲ್ಲಿ ಅಶ್ಲೀಲವಾಗಿ ಸಂಭಾಷಣೆ ನಡೆಸಿದ್ದಾರೆ ಎಂದು ದೂರಿದ್ದ ಮಹಿಳೆಯೋರ್ವರು ಈ ಕುರಿತ ವಿಡಿಯೋ ತುಣುಕನ್ನು ಚಾನೆಲ್‌ಗೆ ನೀಡಿದ್ದಾರೆ. ಈ ಸಂಭಾಷಣೆಯಲ್ಲಿರುವ ಧ್ವನಿ ಸಚಿವ ಶಶೀಂದ್ರನ್ ಅವರದ್ದಾಗಿದೆ ಎಂದು ಕುಮಾರ್ ತಿಳಿಸಿದ್ದರು.
ಪ್ರಕರಣ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಶಶೀಂದ್ರನ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಸುದ್ದಿಯ ಹಿನ್ನೆಲೆಯಲ್ಲಿ ಯಾರನ್ನೇ ‘ಟಾರ್ಗೆಟ್’ ಮಾಡಲು ನನಗಿಷ್ಟವಿಲ್ಲ. ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಕುಮಾರ್ ತಿಳಿಸಿದ್ದಾರೆ.
ಚಾನೆಲ್‌ನ ಕ್ರಮವನ್ನು ಶಶೀಂದ್ರನ್ ಸ್ವಾಗತಿಸಿದ್ದಾರೆ. ಈ ಮಧ್ಯೆ ಶಶೀಂದ್ರನ್ ಅವರನ್ನು ಸಚಿವ ಸಂಪುಟಕ್ಕೆ ಮರಳಿ ಸೇರ್ಪಡೆಗೊಳಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಬಯಸಿದೆ ಎನ್ನಲಾಗಿದೆ.