ಗುಜರಾತ್‌ನಲ್ಲಿ ಮರುಕಳಿಸಿದ ಕೋಮು ಹಿಂಸಾಚಾರ ಮುಸ್ಲಿಂ ಸಮುದಾಯದವರ ಮನೆಗೆ ಬೆಂಕಿ; ಒಬ್ಬರ ಹತ್ಯೆ

Update: 2017-04-01 12:28 GMT

ಅಹ್ಮದಾಬಾದ್, ಎ.1: ಹಿಂದೂ ಮತ್ತು ಮುಸ್ಲಿಂ ಸಮುದಾಯದ ಶಾಲಾ ವಿದ್ಯಾರ್ಥಿಗಳ ನಡುವೆ ನಡೆದ ಸಣ್ಣಮಟ್ಟಿನ ಘರ್ಷಣೆಯೊಂದು ಕೋಮು ಗಲಭೆಯ ರೂಪಕ್ಕೆ ತಿರುಗಿ ದ ಘಟನೆ ಇಲ್ಲಿಗೆ 120 ಕಿ.ಮೀ. ದೂರದ ವಡಾವಾಲಿ ಎಂಬ ಗ್ರಾಮದಲ್ಲಿ ನಡೆದಿದೆ.

  ಗಲಭೆಯಲ್ಲಿ 50ರ ಹರೆಯದ ಇಬ್ರಾಹಿಂ ಬೆಲಿಮ್ ಎಂಬ ವ್ಯಕ್ತಿಯನ್ನು ಇರಿದು ಕೊಲೆ ಮಾಡಲಾಗಿದ್ದು ಇತರ 14 ಮಂದಿ(ಎಲ್ಲರೂ ಮುಸ್ಲಿಮರು) ಗಾಯಗೊಂಡಿದ್ದಾರೆ. ಪಿಸ್ತೂಲ್ ಹಾಗೂ ಇತರ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿದ್ದ 500ರಷ್ಟು ಮಂದಿಯಿದ್ದ ಗುಂಪು ಮುಸ್ಲಿಮ್ ಬಾಹುಳ್ಯದ ಗ್ರಾಮಕ್ಕೆ ನುಗ್ಗಿ ಮುಸಲ್ಮಾನರ ಮೇಲೆ ಹಲ್ಲೆ ನಡೆಸಿದ್ದು 12ಕ್ಕೂ ಹೆಚ್ಚು ಮನೆಗಳಿಗೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

   ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ಇಬ್ರಾಹಿಂ ಬೆಲಿಮ್ ಸೋದರಳಿಯ ಬಾಬೂಭಾಯ್ ಹೇಳುವಂತೆ ಬಹುಸಂಖ್ಯಾತರೇ ಹೆಚ್ಚಿರುವ ಸನ್‌ಸರ್ ಗ್ರಾಮದಿಂದ ಆಗಮಿಸಿದ್ದ ಹಲ್ಲೆಕೋರರ ಗುಂಪು ಸ್ಥಳೀಯ ನಿರ್ಮಿತ ಪಿಸ್ತೂಲು, ಹರಿತವಾದ ಆಯುಧಗಳೊಂದಿಗೆ ಸಜ್ಜಾಗಿದ್ದು ಇಬ್ರಾಹಿಂ ಮೇಲೆ ಹಲ್ಲೆ ನಡೆಸಲು ಆರಂಭಿಸಿತ್ತು. ಇಬ್ರಾಹಿಂರನ್ನು ಕೊಲೆಗೈದ ಬಳಿಕ ನನ್ನತ್ತ ತಿರುಗಿದರು. ನಾನು ಓಡಿ ತಪ್ಪಿಸಿಕೊಂಡೆ ಎಂದವರು ಎನ್‌ಡಿ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

 ಶಸ್ತ್ರಾಸ್ತ್ರ ಹಿಡಿದಿರುವ ಉದ್ರಿಕ್ತ ಗುಂಪೊಂದು ಆಗಮಿಸುತ್ತಿರುವುದನ್ನು ದೂರದಿಂದಲೇ ಕಂಡ ಅಶ್ರಫ್‌ಭಾಯ್ ಶೇಖ್ ಎಂಬವರು, ತನ್ನ ಮನೆಯವರನ್ನು ಕರೆದುಕೊಂಡು ಮನೆಯಿಂದ ದೂರಕ್ಕೆ ಹೊರಟುಹೋಗಿದ್ದರು. ಈ ಮನೆಯನ್ನು ಲೂಟಿ ಮಾಡಿದ ಗುಂಪು ಬಳಿಕ ಬೆಂಕಿ ಇಟ್ಟು ಸುಟ್ಟುಹಾಕಿದೆ. ಕೊಲೆಗಡುಕರ ಗುಂಪು ಪೊಲೀಸ್ ವಾಹನದ ಹಿಂದೆಯೇ ಸಾಗಿ ಬಂದಿದ್ದು ‘ಅವರನ್ನು ಕೊಂದು ಹಾಕಿ’ ಎಂದು ಬೊಬ್ಬಿಡುತ್ತಾ ಎದುರಿಗೆ ಸಿಕ್ಕವರನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು. ಆದರೆ ಪೊಲೀಸರು ಗುಂಪನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅಶ್ರಫ್ ದೂರಿದ್ದಾರೆ.

 ಆದರೆ ಈ ಆರೋಪ ಸುಳ್ಳು ಎಂದಿರುವ ಪೊಲೀಸರು, ಕಿಚ್ಚಿಟ್ಟ ಮತ್ತು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 14 ಮಂದಿಯನ್ನು ಬಂಧಿಸಲಾಗಿದೆ. ಇನ್ನೂ 50ಕ್ಕೂ ಹೆಚ್ಚು ಸಂಶಯಿತರ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಗುಂಪೊಂದು ಗ್ರಾಮದತ್ತ ತೆರಳುತ್ತಿದೆ ಎಂಬ ಮಾಹಿತಿ ದೊರೆತೊಡನೆ ತಕ್ಷಣ ಸ್ಥಳಕ್ಕೆ ಧಾವಿಸಿದ್ದೇವೆ. ನಮ್ಮ ಸಕಾಲಿಕ ಕ್ರಮದಿಂದ ಹೆಚ್ಚಿನ ಅನಾಹತ ತಪ್ಪಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

   ಘಟನೆಗೆ ಪ್ರತಿಯಾಗಿ ಮುಸ್ಲಿಂ ಸಮುದಾಯದವರು ಕಲ್ಲೆಸೆತ ನಡೆಸಿದ್ದು ಪೊಲೀಸರು ಅಶ್ರುವಾಯು ನಡೆಸಿದರಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಜಿಲ್ಲೆಯ ಉನ್ನತ ಕಾರ್ಯನಿರ್ವಾಹಕ ಅಧಿಕಾರಿ ಕೆ.ಕೆ.ನಿರಾಲ ತಿಳಿಸಿದ್ದಾರೆ. ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸನ್‌ಸಾರ್‌ನ ಹಿಂದೂ ಸಮುದಾಯದ ವ್ಯಕ್ತಿಯೋರ್ವರು ಪೊಲೀಸ್ ದೂರು ದಾಖಲಿಸಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮ ಸರಪಂಚ(ಅಧ್ಯಕ್ಷ)ರನ್ನು ಆರಿಸಲು ‘ಸಮರಸ ಯೋಜನೆ’ಯನ್ನು ಅನುಷ್ಠಾನಗೊಳಿಸಿದ್ದರು. ಗ್ರಾಮದ ಜನರೆಲ್ಲರೂ ಒಟ್ಟು ಸೇರಿ ಒಮ್ಮತದಿಂದ ಅಧ್ಯಕ್ಷರನ್ನು ಆರಿಸುವ ಯೋಜನೆಯಿದು. ಇದರಂತೆ ಹಿಂಸಾಚಾರ ನಡೆದ ಹಿಂದಿನ ದಿವಸ ಗ್ರಾಮದ 2,000 ಕುಟುಂಬಗಳು ಒಟ್ಟು ಸೇರಿ ಒಮ್ಮತದ ಅಭಿಪ್ರಾಯದಂತೆ ಸರಪಂಚರನ್ನು ಆಯ್ಕೆ ಮಾಡಿದ್ದಾರೆ. ಗ್ರಾಮದ 300 ಮುಸ್ಲಿಂ ಕುಟುಂಬದ ಒಪ್ಪಿಗೆಯ ಮೇರೆಗೆ ಸರಪಂಚರ ಕಾರ್ಯಾವಧಿಯನ್ನು ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಹಂಚಿಕೊಳ್ಳಲು ನಿರ್ಧರಿಸಲಾಗಿದೆ.

 ಗ್ರಾಮಸ್ಥರು ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಮುಂದಿನ ಎರಡೂವರೆ ವರ್ಷಾವಧಿಗೆ ಸರಪಂಚರ ಹುದ್ದೆಗೆ ಸಲೀಂ ಭಾಯ್‌ರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಅವಧಿಗೆ ಹಿಂದೂ ಸಮುದಾಯದ ವ್ಯಕ್ತಿಯನ್ನು ಆರಿಸಲಾಗುವುದು ಎಂದು ನಿರ್ಗಮಿತ ಸರಪಂಚ್ ಮಿನೇಶ್ ಪಟೇಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News