ಆಸ್ಟ್ರೇಲಿಯ ಚಂಡಮಾರುತ : 2 ಸಾವು
ಸಿಡ್ನಿ (ಆಸ್ಟ್ರೇಲಿಯ), ಎ. 1: ಪ್ರಬಲ ಚಂಡಮಾರುತದ ಪರಿಣಾಮವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಆಸ್ಟ್ರೇಲಿಯದ ಪೂರ್ವ ಕರಾವಳಿ ಪ್ರವಾಹಕ್ಕೆ ತುತ್ತಾಗಿದ್ದು, ಸಾವಿರಾರು ಮಂದಿ ಪೀಡಿತರಾಗಿದ್ದಾರೆ.
ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಚಂಡಮಾರುತ ‘ಡೆಬ್ಬೀ’ಯು ಕ್ವೀನ್ಸ್‌ಲ್ಯಾಂಡ್ ರಾಜ್ಯದ ರಿಸಾರ್ಟ್ ದ್ವೀಪ ಮತ್ತು ಗೋಲ್ಡ್ ಕೋಸ್ಟ್ ಪ್ರವಾಸಿ ತಾಣದಿಂದ ಹಿಡಿದು ನ್ಯೂಸೌತ್‌ವೇಲ್ಸ್ ರಾಜ್ಯದ ಕೃಷಿ ಹೊಲಗಳವರೆಗೆ ಸುಮಾರು 1,000 ಕಿ.ಮೀ. ವ್ಯಾಪ್ತಿಯಲ್ಲಿ ವಿನಾಶ ಸೃಷ್ಟಿಸಿದೆ. ಇಲ್ಲಿನ ಒಂದು ಲಕ್ಷಕ್ಕೂ ಅಧಿಕ ಮನೆಗಳ ವಿದ್ಯುತ್ ಸಂಪರ್ಕ ಕಡಿದಿದೆ.
ಆರು ದೊಡ್ಡ ನದಿಗಳು ಪ್ರವಾಹದಿಂದ ಉಕ್ಕಿ ಹರಿಯುತ್ತಿವೆ ಹಾಗೂ ಹಲವು ಸ್ಥಳಗಳಲ್ಲಿ ಪ್ರವಾಹ ಮಟ್ಟ ಈಗಲೂ ಹೆಚ್ಚುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶುಕ್ರವಾರ ಪ್ರವಾಹದ ನೀರಿನಿಂದ ಇಬ್ಬರು ಮಹಿಳೆಯರ ಮೃತದೇಹಗಳನ್ನು ಪತ್ತೆಹಚ್ಚಿರುವುದಾಗಿ ಪೊಲೀಸರು ತಿಳಿಸಿದರು.
ಪ್ರವಾಹದ ಮಟ್ಟ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾವಿಗೀಡಾದವರ ಪ್ರಮಾಣ ಹೆಚ್ಚಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.