ಭಾರತಕ್ಕೆ ಚೀನಾ ಮತ್ತೊಮ್ಮೆ ಎಚ್ಚರಿಕೆ
ಬೀಜಿಂಗ್, ಎ. 1: ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರಿಗೆ ಅರುಣಾಚಲಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡಿದರೆ, ದ್ವಿಪಕ್ಷೀಯ ಸಂಬಂಧಕ್ಕೆ ‘ತೀವ್ರ ಧಕ್ಕೆ’ಯಾಗುತ್ತದೆ ಎಂಬುದಾಗಿ ಚೀನಾ ಇಂದು ಭಾರತಕ್ಕೆ ಎಚ್ಚರಿಕೆ ನೀಡಿದೆ.ಇದು ಒಂದು ತಿಂಗಳಿನಲ್ಲಿ ಚೀನಾ ಭಾರತಕ್ಕೆ ನೀಡಿದ ಎರಡನೆ ಎಚ್ಚರಿಕೆಯಾಗಿದೆ.
ಅದೇ ವೇಳೆ, ಟಿಬೆಟ್ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ತನ್ನ ‘ರಾಜಕೀಯ ವಾಗ್ದಾನ’ಗಳನ್ನು ಗೌರವಿಸಬೇಕೆಂದೂ ಚೀನಾ ಹೇಳಿದೆ.
‘‘ಈ ಸುದ್ದಿಯ ಬಗ್ಗೆ ನಾವು ಗಂಭೀರ ಕಳವಳಗೊಂಡಿದ್ದೇವೆ. ಚೀನಾ-ಭಾರತ ಗಡಿಯ ಪೂರ್ವದ ಭಾಗಕ್ಕೆ ಸಂಬಂಧಿಸಿ ಚೀನಾದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ’’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಶುಕ್ರವಾರ ಬೀಜಿಂಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಅರುಣಾಚಲಪ್ರದೇಶಕ್ಕೆ ದಲಾಯಿ ಲಾಮಾ ನೀಡಲಿರುವ ಭೇಟಿಯ ಕುರಿತ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.ಅರುಣಾಚಲಪ್ರದೇಶ ದಕ್ಷಿಣ ಟಿಬೆಟ್‌ನ ಭಾಗವಾಗಿದೆ ಎಂದು ಚೀನಾ ಹೇಳಿಕೊಳ್ಳುತ್ತಿದೆ.
‘‘ದಲಾಯಿ ಕೂಟವು ತುಂಬಾ ಹಿಂದಿನಿಂದಲೂ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದೆ. ದಲಾಯಿ ಕೂಟದ ನಿಜವಾದ ಸ್ವರೂಪದ ಬಗ್ಗೆ ಭಾರತ ಎಚ್ಚರಿಕೆಯಿಂದಿರಬೇಕು’’ ಎಂದು ಲು ಹೇಳಿದರು.
‘‘ಆದರೆ, ಇದರ ಹೊರತಾಗಿಯೂ ಈ ವಲಯಕ್ಕೆ ಭೇಟಿ ನೀಡುವಂತೆ ಭಾರತ ದಲಾಯಿ ಲಾಮಾರನ್ನು ಆಹ್ವಾನಿಸಿದೆ. ಇದು ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ’’ ಎಂದು ಲು ನುಡಿದರು.
ದಲಾಯಿ ಲಾಮಾ ಎಪ್ರಿಲ್ 4ರಿಂದ 13ರವರೆಗೆ ಅರುಣಾಚಲಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಚೀನಾ ವಿದೇಶ ಸಚಿವಾಲಯವು ಅರುಣಾಚಲಪ್ರದೇಶಕ್ಕೆ ದಲಾಯಿ ಲಾಮಾ ನೀಡುತ್ತಿರುವ ಭೇಟಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಒಂದು ತಿಂಗಳ ಅವಧಿಯಲ್ಲಿ ಇದು ಎರಡನೆ ಬಾರಿಯಾಗಿದೆ.
‘‘ಅರುಣಾಚಲಪ್ರದೇಶಕ್ಕೆ ಭೇಟಿ ನೀಡಲು ಭಾರತ ದಲಾಯಿ ಲಾಮಾರಿಗೆ ಅನುಮತಿ ನೀಡಿದೆ ಎಂಬ ಮಾಹಿತಿಯಿಂದ ನಾವು ಅತ್ಯಂತ ಕಳವಳಗೊಂಡಿದ್ದೇವೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್ ಮಾರ್ಚ್ 3ರಂದು ಹೇಳಿದ್ದರು.