ಕರ್ನಾಟಕಕ್ಕೆ ಕೇಂದ್ರದಿಂದ 1,235.52 ಕೋ.ರೂ.ಬರ ಪರಿಹಾರ ಬಿಡುಗಡೆ

Update: 2017-04-01 18:06 GMT
ಸಾಂಧರ್ಬಿಕ ಚಿತ್ರ

ಹೊಸದಿಲ್ಲಿ,ಎ.1: ಕೇಂದ್ರ ಸರಕಾರವು ತೀವ್ರ ಬರದ ಬವಣೆಗೆ ಗುರಿಯಾಗಿರುವ ಕರ್ನಾಟಕಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ(ಎನ್‌ಡಿಆರ್‌ಎಫ್)ಯಿಂದ 1,235.52 ಕೋ.ರೂ.ಬರ ಪರಿಹಾರವನ್ನು ಶನಿವಾರ ಬಿಡುಗಡೆ ಮಾಡಿದೆ. ಇದೇ ವೇಳೆ ಬರದಿಂದ ತತ್ತರಿಸುತ್ತಿರುವ ನೆರೆಯ ತಮಿಳುನಾಡಿಗೂ 1,712.10 ಕೋ.ರೂ.ಬರ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.

ಉಭಯ ರಾಜ್ಯಗಳ ರೈತರು ಕೇಂದ್ರದಿಂದ ಬರ ಪರಿಹಾರಕ್ಕಾಗಿ ಆಗ್ರಹಿಸಿದ್ದರು. ಸತತ ಬರಗಾಲದಿಂದಾಗಿ ಇತರ ರಾಜ್ಯಗಳಿಂದಲೂ ಕೃಷಿಸಾಲ ಮನ್ನಾಕ್ಕಾಗಿ ಕೂಗುಗಳು ಹೆಚ್ಚುತ್ತಿವೆ. ಮಳೆಯ ಕೊರತೆ ಮತ್ತು ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರಿಗೆ ನೆರವಾಗಲು ಕೇಂದ್ರ ಸರಕಾರವು ಬೆಳ ವಿಮೆ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2016-17ನೇ ಸಾಲಿಗೆ 13,240 ಕೋ.ರೂ.ಗಳನ್ನು ಒದಗಿಸಲಾಗಿದೆ ಎಂದು ಸರಕಾರವು ತಿಳಿಸಿದೆ.

ದೇಶದ ಇತರ ರಾಜ್ಯಗಳೊಂದಿಗೆ ಕರ್ನಾಟಕ ಮತ್ತು ತಮಿಳುನಾಡು ಮಳೆಯ ಕೊರತೆಯನ್ನು ಅನುಭವಿಸಿದ್ದು, ಇದು ಕುಡಿಯುವ ನೀರಿನ ತೀವ್ರ ಅಭಾವ ಮತ್ತು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟಕ್ಕೆ ಕಾರಣವವಾಗಿದೆ.

ಕೇವಲ ಶೇ.50ರಷ್ಟು ಮಳೆಯಾಗುವದರೊಂದಿಗೆ ಕರ್ನಾಟಕವು ಸತತ ಎರಡನೇ ವರ್ಷ ಬರದ ದವಡೆಗೆ ಸಿಲುಕಿದೆ. ಗಾಯದ ಮೇಲೆ ಬರೆ ಎಳೆದಂತೆ ಕುಡಿಯುವ ನೀರಿನ ತೀವ್ರ ಅಭಾವವಿದ್ದರೂ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶಿಸಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇನ್ನಷ್ಟು ಹೆಚ್ಚಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News