ಕೊಲಂಬಿಯದಲ್ಲಿ ಪ್ರವಾಹ: 254 ಮಂದಿ ಬಲಿ

Update: 2017-04-02 05:34 GMT

ಬೊಗೊಟ(ಕೊಲಂಬಿಯ), ಎ.2: ಕೊಲಂಬಿಯದ ಮೊಕೋದಲ್ಲಿ ಶನಿವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವಾರು ನದಿಗಳು ಉಕ್ಕಿ ಹರಿದಿದ್ದು, ಜಲಪ್ರಳಯ ಹಾಗೂ ಭೂಕುಸಿತದ ಪರಿಣಾಮ ಮೃತರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. 400 ಮಂದಿ ಗಾಯಗೊಂಡಿದ್ದಾರೆ. 200ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.

ಭಾರೀ ಮಳೆಯಿಂದಾಗಿ ಕಟ್ಟಡಗಳು, ಬೃಹತ್ ಮರಗಳು ಕುಸಿದುಬಿದ್ದಿದ್ದು, ಮನೆಗಳು ಹಾಗೂ ರಸ್ತೆಗಳಲ್ಲಿ ಕೆಸರು ಜಮಾವಣೆಯಾಗಿದೆ. ಮಳೆಯಿಂದಾಗಿ ಬಾಧಿತಗೊಂಡಿರುವ 17 ಪ್ರದೇಶಗಳಲ್ಲಿ 1,100ಕ್ಕೂ ಅಧಿಕ ಸೈನಿಕರು ಹಾಗೂ ಪೊಲೀಸರು ಅಧಿಕಾರಿಗಳು ರಕ್ಷಣಾಕಾರ್ಯಾಚರಣೆಯಲ್ಲಿ ತೊಡಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಮುಂದಾಗಿದ್ದಾರೆ.

ರಾತ್ರಿ ಜನರು ನಿದ್ದೆಯಲ್ಲಿದ್ದಾಗ ಹಲವಾರು ನದಿಗಳಿಂದ ಉಕ್ಕಿ ಬಂದ ಪ್ರವಾಹದಿಂದ ಜಲ ಸಮಾಧಿಯಾಗಿದ್ದು, ಮನೆಗಳು, ವಾಹನಗಳು ಕೊಚ್ಚಿಕೊಂಡು ಹೋಗಿವೆ. ನಗರಗಳ ರಸ್ತೆಗಳಲ್ಲಿ ಕೆಸರಿನ ನೀರು ಜಮೆಯಾಗಿದ್ದು, ಮರಗಳು ಬುಡಸಮೇತ ಧರೆಗುರುಳಿವೆ.

ರೆಡ್ ಕ್ರಾಸ್ ಮೂಲಗಳ ಪ್ರಕಾರ, 202 ಜನರು ಗಾಯಗೊಂಡಿದ್ದು, 220 ಜನರು ನಾಪತ್ತೆಯಾಗಿದ್ದಾರೆ. ಅಧ್ಯಕ್ಷ ಜುಯಾನ್ ಮ್ಯಾನುಯೆಲ್ ಸ್ಯಾಂಟೊಸ್ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಮೃತರ ಸಂಖ್ಯೆಯ ಬಗ್ಗೆ ವದಂತಿ ಹಬ್ಬಿಸದಂತೆ ಎಚ್ಚರಿಕೆ ನೀಡಲಾಗಿದೆ.

ಮೋಕೊ ನಗರದ ನಿವಾಸಿಗಳು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗಾಗಿ ಹುಟುಕಾಟ ಮುಂದುವರಿಸಿದ್ದಾರೆ. ರಾತ್ರಿ ಬೆಳಗಾಗುವುದರಲ್ಲಿ ನಗರದ ಚಿತ್ರಣವೆಲ್ಲ ಬದಲಾಗಿದ್ದು, ಮನೆಗಳು ಹಾಗೂ ರಸ್ತೆಗಳು ಮಾಯವಾಗಿದ್ದವು. ಎಲ್ಲೆಂದರಲ್ಲಿ ಮೃತದೇಹಗಳು ಬಿದ್ದುಕೊಂಡಿದ್ದವು. ಕೊಲಂಬಿಯ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ಪ್ರಕೃತಿ ವಿಕೋಪ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News