×
Ad

ತನ್ನ ಸಮಾವೇಶದಲ್ಲಿ 'ಮೋದಿ' ಘೋಷಣೆ ಕೂಗಿದವರಿಗೆ ಕೇಜ್ರಿವಾಲ್ ಉತ್ತರವೇನು ಗೊತ್ತೆ?

Update: 2017-04-02 12:47 IST

ಹೊಸದಿಲ್ಲಿ, ಎ.2: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದಿಲ್ಲಿ ಮುನ್ಸಿಪಲ್ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಒಂದು ಗುಂಪು ಕೇಜ್ರಿವಾಲ್‌ರ ರ್ಯಾಲಿಯನ್ನು ತಡೆಯಲು ಯತ್ನಿಸಿದ್ದಲ್ಲದೆ 'ಮೋದಿ, ಮೋದಿ' ಎಂದು ಘೋಷಣೆ ಹಾಕಿತು. 'ಮೋದಿ, ಮೋದಿ' ಎಂದು ಘೋಷಣೆ ಕೂಗುತ್ತಿದ್ದ ಗುಂಪಿಗೆ ಕೇಜ್ರಿವಾಲ್ ತಕ್ಕ ಪ್ರತ್ಯುತ್ತರವನ್ನೇ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯ ಪರವಾಗಿ ಘೋಷಣೆ ಕೂಗಿದರೆ ವಿದ್ಯುತ್ ದರ ಕಡಿತವಾಗುತ್ತದೆಯೇ? ಅಥವಾ ಮನೆ ತೆರಿಗೆ ರದ್ದಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

  'ಮೋದಿ, ಮೋದಿ' ಎಂದು ಘೋಷಣೆ ಕೂಗಿದಾಗ ಮನೆ ತೆರಿಗೆ ರದ್ದಾಗಿ, ವಿದ್ಯುತ್ ದರ ಕಡಿಮೆಯಾದರೆ ನಾನು ಕೂಡ 'ಮೋದಿ, ಮೋದಿ' ಎಂದು ಘೋಷಣೆ ಕೂಗುವೆ. 'ಮೋದಿ, ಮೋದಿ' ಎಂದು ಘೋಷಣೆ ಕೂಗಿದಾಗ ನಮ್ಮ ಹಸಿವು ಕಡಿಮೆಯಾಗುವುದಿಲ್ಲ. ಕೆಲವು ಜನರು ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.

 ದಿಲ್ಲಿಯ ಮುನ್ಸಿಪಲ್ ಚುನಾವಣೆಯು ಎ.23ಕ್ಕೆ ನಿಗದಿಯಾಗಿದೆ. ಪಂಜಾಬ್‌ನಲ್ಲಿ ಎರಡನೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಎಎಪಿ ಗೋವಾದಲ್ಲಿ ಒಂದೂ ಕ್ಷೇತ್ರವನ್ನು ಗೆದ್ದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತರೂಢ ಎಎಪಿಗೆ ದಿಲ್ಲಿಯ ಸ್ಥಳೀಯ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ.

ಎಎಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ತಂತ್ರರೂಪಿಸುತ್ತಿವೆ. ಬಿಜೆಪಿ ಸತತ ಮೂರನೆ ಬಾರಿ ಅಧಿಕಾರಕ್ಕೇರಲು ಯತ್ನಿಸುತ್ತಿದೆ.

 ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಂದು ವರ್ಷದಲ್ಲಿ ನಗರವನ್ನು ಸ್ವಚ್ಛಗೊಳಿಸುವೆ. ವಿದ್ಯುತ್ ದರವನ್ನು ಕಡಿತ ಮಾಡಿ, ಉಚಿತ ನೀರನ್ನು ಸರಕಾರದ ವತಿಯಿಂದ ವಿತರಿಸಲು ಕ್ರಮಕೈಗೊಳ್ಳಲಾಗುತ್ತದೆ. ಮನೆ ತೆರಿಗೆಯನ್ನು ರದ್ದುಪಡಿಸುತ್ತೇವೆ. ನಾವು ಭ್ರಷ್ಟಾಚಾರವನ್ನು ಅಂತ್ಯಗೊಳಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ಐದು ಫ್ಲೈಓವರ್ ನಿರ್ಮಾಣದಿಂದ 500 ಕೋ.ರೂ. ಉಳಿತಾಯ ಮಾಡಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News