×
Ad

ಪಾಕಿಸ್ತಾನದಲ್ಲಿ ದರ್ಗಾದ ‘ಮಾನಸಿಕ ಅಸ್ವಸ್ಥ’ ಮೇಲ್ವಿಚಾರಕನಿಂದ 20 ಜನರ ಹತ್ಯೆ

Update: 2017-04-02 15:03 IST

ಲಾಹೋರ,ಎ.2: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾದ ದರ್ಗಾವೊಂದರಲ್ಲಿ ನಿನ್ನೆ ಮಧ್ಯರಾತ್ರಿ ಮಾನಸಿಕ ಅಸ್ವಸ್ಥನೆನ್ನಲಾದ ಅದರ ಮೇಲ್ವಿಚಾರಕ ಮತ್ತು ಆತನ ಸಹಚರರು ಸೇರಿಕೊಂಡು ಒಂದೇ ಕುಟುಂಬದ ಆರು ಸದಸ್ಯರು ಸೇರಿದಂತೆ 20 ಜನರಿಗೆ ಚಿತ್ರಹಿಂಸೆ ನೀಡಿ ಕೊಂದುಹಾಕಿದ್ದಾರೆ.

ಲಾಹೋರಿನಿಂದ ಸುಮಾರು 200 ಕಿ.ಮೀ.ದೂರದ ಸರ್ಗೋಧಾ ಜಿಲ್ಲೆಯ ಗ್ರಾಮವೊಂದರಲ್ಲಿರುವ ಮುಹಮ್ಮದ್ ಅಲಿ ಗುಜ್ಜರ್ ದರ್ಗಾದಲ್ಲಿ ಈ ಭೀಕರ ಹತ್ಯಾಕಾಂಡ ನಡೆದಿದೆ ಎಂದು ಜಿಲ್ಲಾಧಿಕಾರಿ ಲಿಯಾಕತ್ ಅಲಿ ಚಾಥಾ ಅವರು ರವಿವಾರ ಬೆಳಿಗ್ಗೆ ತಿಳಿಸಿದರು.

ದರ್ಗಾದ ಮೇಲ್ವಿಚಾರಕ ಅಬ್ದುಲ್ ವಾಹೀದ್ ಮತ್ತು ಆತನ ಸಹಚರರು ಮೊದಲು ಬಲಿಪಶುಗಳಿಗೆ ಮಾದಕ ವಸ್ತು ನೀಡಿದ್ದರೆನ್ನಲಾಗಿದ್ದು, ಬಳಿಕ ಅವರನ್ನೆಲ್ಲ ವಿವಸ್ತ್ರಗೊಳಿಸಿ ಚೂರಿಯಿಂದ ಇರಿದು, ದೊಣ್ಣೆಯಿಂದ ಬಡಿದು ಹತ್ಯೆಗೈದಿದ್ದಾರೆ. ಕೊಲೆಯಾದವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ ಎಂದು ಅವರು ಹೇಳಿದರು.

ಈ ಭೀಕರ ಕೃತ್ಯದ ಹಿಂದಿನ ಉದ್ದೇಶ ಈವರೆಗೆ ಗೊತ್ತಾಗಿಲ್ಲ,ಆದರೆ ಶಂಕಿತ ಆರೋಪಿಗಳು ಭಕ್ತರಿಗೆ ಧಾರ್ಮಿಕ ಪ್ರವಚನ ನೀಡಲು ಕಳೆದೆರಡು ವರ್ಷಗಳಿಂದ ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಮಝರ್ ಶಾ ಹೇಳಿದರು.

ಮೇಲ್ವಿಚಾರಕರಾದ ವಾಹೀದ್ ಮತ್ತು ಯೂಸುಫ್ ಸೇರಿದಂತೆ ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿದೆ ಎಂದರು.

ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ತಾವು ಮಾಡಿದ ಪಾಪಗಳಿಂದ ಮುಕ್ತರಾಗಲು ಈ ದರ್ಗಾಕ್ಕೆ ಬರುವ ಜನರು ಅಲ್ಲಿಯ ಮೇಲ್ವಿಚಾರಕರಿಂದ ದೊಣ್ಣೆಯ ಪೆಟ್ಟುಗಳನ್ನು ತಿನ್ನುವುದು ಇಲ್ಲಿಯ ಸಂಪ್ರದಾಯವಾಗಿದೆ. ಇದರಿಂದ ತಾವು ಪಾಪಮುಕ್ತರಾಗುತ್ತೇವೆ ಎನ್ನುವುದು ಜನರ ನಂಬಿಕೆಯಾಗಿದೆ.

ಪ್ರಮುಖ ಶಂಕಿತ ಲಾಹೋರ ನಿವಾಸಿಯಾಗಿದ್ದು, ಪಾಕಿಸ್ತಾನ ಚುನಾವಣಾ ಆಯೋಗದ ಉದ್ಯೋಗಿಯಾಗಿದ್ದಾನೆ ಎಂದು ಚಾಥಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News